ನಿಷೇಧಕ್ಕಿಲ್ಲ ಬೆಲೆ..!
ಮಾನ್ಯರೆ,
ರಾಜ್ಯ ಸರಕಾರ ಪ್ಲಾಸ್ಟಿಕ್ ಬ್ಯಾಗ್‌ಗಳಿಗೆ ನಿಷೇಧ ವಿಧಿಸಿ ತಿಂಗಳುಗಳೇ ಕಳೆಯಿತು. ಆದರೆ ಬೆಂಗಳೂರಿನ ಹೆಚ್ಚಿನ ಕಡೆ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಇನ್ನೂ ನಿಂತಿಲ್ಲ. ರಾತ್ರಿ ವೇಳೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಟೀ ಮಾರುವವರು ಕಾಗದದ ಕಪ್‌ಅನ್ನು ಬಳಸುವ ಮೂಲಕ ತೋರುವ ಸಾಮಾನ್ಯ ಬುದ್ಧಿಯನ್ನು ಪ್ರಮುಖ ಮಾರುಕಟ್ಟೆಗಳಲ್ಲಿರುವ ಅಂಗಡಿ ಮಾಲಕರು ತೋರಿಸುತ್ತಿಲ್ಲ. ಪ್ರಮುಖ ಸ್ಥಳಗಳಲ್ಲಿ ಹಗಲಲ್ಲೇ ಎಗ್ಗಿಲ್ಲದೇ ಪ್ಲಾಸ್ಟಿಕ್ ಕವರ್ ಸೇರಿ ಇತರ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಸರಕಾರದ ಆದೇಶವನ್ನು ಗಾಳಿಗೆ ತೂರಲಾಗುತ್ತಿದೆ.
ಸರಕಾರ ಆದೇಶವನ್ನೇನೋ ನೀಡಿದೆ. ಆದರೆ ಈ ಆದೇಶ ಜಾರಿಗೊಳ್ಳಲು ಸಮರ್ಪಕ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳನ್ನು ಸರ್ವೇಗೆ ಕಳಿಸಿಲ್ಲ. ಕಾರಣ ಕೇಳಿದರೆ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಹೊಣೆ ಯಾರು..? ಇದನ್ನು ಸ್ವತಃ ನಾವು ಹೇಳುತ್ತಿಲ್ಲ. ಬಿಬಿಎಂಪಿ ಪ್ರತಿನಿತ್ಯ ಸಂಗ್ರಹಿಸುವ ಸುಮಾರು 4,000 ಟನ್ ಕಸದಲ್ಲಿ ಸುಮಾರು 1,300 ಟನ್ ಪ್ಲಾಸ್ಟಿಕ್‌ಗಳೇ ಇರುತ್ತವೆ ಎಂಬ ದಾಖಲೆಯೇ ಸಾಕ್ಷಿ.