ಸಿಐಎ ಏಜೆಂಟ್‌ಗಳ ಮೇಲೆ ದಾಳಿ ಸಂಘಟಿಸಿದ್ದ ಐಎಸ್‌ಐ
ವಾಶಿಂಗ್ಟನ್, ಎ. 15: 2009ರಲ್ಲಿ ಅಫ್ಘಾನಿಸ್ತಾನದ ನೆಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಐಎ (ಅಮೆರಿಕದ ಗುಪ್ತಚರ ಸಂಸ್ಥೆ) ಬೇಹುಗಾರರ ಮೇಲೆ ಆತ್ಮಹತ್ಯಾ ಬಾಂಬ್‌ದಾಳಿ ನಡೆಸಲು ಭಯೋತ್ಪಾದಕ ಜಾಲವೊಂದಕ್ಕೆ ಪಾಕಿಸ್ತಾನದ ಬೇಹುಗಾರಿಕಾ ಅಧಿಕಾರಿಯೊಬ್ಬರು 2 ಲಕ್ಷ ಡಾಲರ್ (ಸುಮಾರು 1 ಕೋಟಿ 33 ಲಕ್ಷ ರೂಪಾಯಿ) ನೀಡಿದ್ದರು ಎಂದು ರಹಸ್ಯಮುಕ್ತಗೊಳಿಸಲ್ಪಟ್ಟ ಅಮೆರಿಕ ಸರಕಾರದ ದಾಖಲೆಯೊಂದು ತಿಳಿಸಿದೆ.
ಈ ದಾಖಲೆಯನ್ನು ಜಾರ್ಜ್ ವಾಶಿಂಗ್ಟನ್ ವಿಶ್ವ ವಿದ್ಯಾನಿಲಯದಲ್ಲಿ ಸರಕಾರೇತರ ಸಂಶೋಧನಾ ಸಂಸ್ಥೆಯಾಗಿರುವ ನ್ಯಾಶನಲ್ ಸೆಕ್ಯುರಿಟಿ ಆರ್ಕೈವ್ ಪಡೆದುಕೊಂಡಿದೆ.
ಈ ದಾಳಿಯನ್ನು ಕಾರ್ಯಗತ ಗೊಳಿಸುವಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆ ಹಕ್ಕಾನಿ ನೆಟ್‌ವರ್ಕ್‌ಪರಸ್ಪರ ಕೈಜೋಡಿಸಿದ್ದವು ಎಂದು ಭಾರೀ ಪ್ರಮಾಣದಲ್ಲಿ ಕತ್ತರಿ ಪ್ರಯೋಗಕ್ಕೆ ಒಳಗಾಗಿರುವ ದಾಖಲೆ ತಿಳಿಸಿದೆ.
2009 ಡಿಸೆಂಬರ್ 30ರಂದು ಪೂರ್ವ ಅಫ್ಘಾನಿಸ್ತಾನದ ಖೋಸ್ತ್‌ನಲ್ಲಿರುವ ಮುಂಚೂಣಿಯ ಕಾರ್ಯಾಚರಣೆ ನೆಲೆಯ ಮೇಲೆ ಜೋರ್ಡಾನ್‌ನ ವೈದ್ಯನೊಬ್ಬ ದಾಳಿ ನಡೆಸಿದ್ದನು. ಆತ ಅಲ್-ಖಾಯಿದ ಮತ್ತು ತಾಲಿಬಾನ್‌ಗಳಿಗೆ ಡಬಲ್ ಏಜಂಟ್ ಆಗಿ ಕೆಲಸ ಮಾಡುತ್ತಿದ್ದನು.
ಆ ದಾಳಿಯು ಸಿಐಎಯ ಇತಿಹಾಸದಲ್ಲೇ ಅತ್ಯಂತ ಮಾರಕವಾಗಿತ್ತು ಹಾಗೂ ಅದರಿಂದಾಗಿ 7 ಮಂದಿ ಪ್ರಾಣ ಕಳೆದುಕೊಂಡಿದ್ದರು ಹಾಗೂ ಆರು ಮಂದಿ ಗಾಯಗೊಂಡಿದ್ದರು.
ಚಾಪ್‌ಮನ್ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಐಎಸ್‌ಐ ಅಧಿಕಾರಿಯೊಬ್ಬರು ಹಕ್ಕಾನಿ ಸದಸ್ಯ ಮತ್ತು ಇನ್ನೋರ್ವ ವ್ಯಕ್ತಿಗೆ 2 ಲಕ್ಷ ಡಾಲರ್ ನೀಡಿದ್ದರು ಎಂದು 2010 ಫೆಬ್ರವರಿಯ ಕೇಬಲ್ ಹೇಳುತ್ತದೆ. ಈ ಬಾಂಬ್ ದಾಳಿಗೆ ಏರ್ಪಾಡು ಮಾಡಿ ಕೊಡಲು ಖೋಸ್ತ್‌ನಲ್ಲಿರುವ ಅಫ್ಘಾನ್ ಗಡಿ ಕಮಾಂಡರ್ ಒಬ್ಬನಿಗೆ 1 ಲಕ್ಷ ಡಾಲರ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಬಾಂಬ್ ದಾಳಿಯಲ್ಲಿ ಅವನು ಮೃತಪಟ್ಟನು ಎಂದಿದೆ.