ನ್ಯೂಯಾರ್ಕ್: ಟ್ರಂಪ್ ವಿರುದ್ಧ ಪ್ರತಿಭಟನೆ
ನ್ಯೂಯಾರ್ಕ್, ಎ. 15: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್‌ನಲ್ಲಿ ಗುರುವಾರ ನೂರಾರು ಮಂದಿ ಪ್ರತಿಭಟನೆ ನಡೆಸಿದರು.
ರಿಪಬ್ಲಿಕನ್ ಅಭ್ಯರ್ಥಿಗಳ ಚುನಾವಣಾ ಪ್ರಚಾರ ನಡೆದ ಮ್ಯಾನ್‌ಹ್ಯಾಟನ್‌ನ ಹೊಟೇಲೊಂದರ ಹೊರಗೆ ಜನರು ಪ್ರದರ್ಶನ ನಡೆಸಿದರು.
ಟ್ರಂಪ್‌ರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಸುವ ಪತಾಕೆಗಳನ್ನು ಪ್ರತಿಭಟನಕಾರರು ಹಿಡಿದಿದ್ದರು ಹಾಗೂ ಟ್ರಂಪ್ ಜನಾಂಗೀಯವಾದಿ ಹಾಗೂ ವಲಸೆ ವಿರೋಧಿ ಎಂಬುದಾಗಿ ಆರೋಪಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ಏರ್ಪಡಿಸಿದ್ದರು.
''ಟ್ರಂಪ್ ಬೇಡ, ಜನಾಂಗವಾದ ಬೇಡ, ಇಲ್ಲಿಗೆ ವಲಸಿಗರು ಸ್ವೀಕಾರಾರ್ಹರು!'' ಎಂಬ ಘೋಷಣೆಯನ್ನು ಪ್ರತಿಭಟನಕಾರರು ಕೂಗಿದರು. ''ನ್ಯೂಯಾರ್ಕ್ ದ್ವೇಷ ವಲಯವಲ್ಲ'' ಎಂದು ಇನ್ನೊಂದು ಪತಾಕೆಯಲ್ಲಿ ಬರೆಯಲಾಗಿತ್ತು.
''ರಿಪಬ್ಲಿಕನ್ ಪಕ್ಷದ ವೇದಿಕೆಯು ದ್ವೇಷ ಮತ್ತು ಭೀತಿಯಿಂದ ತುಂಬಿದೆ'' ಎಂದು ಮಾಜಿ ಸೈನಿಕ ಜಾಸನ್ ಹರ್ಡ್ ಹೇಳಿದರು. ಅವರು 'ಇರಾಕ್ ವೆಟರನ್ಸ್ ಅಗೆನ್ಸ್ಟ್ ದ ವಾರ್ (ಯುದ್ಧ ವಿರೋಧಿಸುವ ಇರಾಕ್‌ನಲ್ಲಿ ಯುದ್ಧ ಮಾಡಿದ ಮಾಜಿ ಸೈನಿಕರು)'ಎಂಬ ಶಾಂತಿಪ್ರಿಯ ಆಂದೋಲನವೊಂದನ್ನು ಆರಂಭಿಸಿದ್ದಾರೆ.