ಹೊಟ್ಟೆಗೆ ನೀಡದೆ ಮನೆಗೆಲಸದಾಕೆಯನ್ನು ಕೊಂದ ಗೃಹಿಣಿ !
ದುಬೈ, ಎ. 16: ಮನೆಗೆಲಸದಾಕೆಗೆ ಹೊಟ್ಟೆಗೆ ನೀಡದೆ ಆಕೆಗೆ ದೈಹಿಕ ಹಲ್ಲೆ ಕೂಡ ನಡೆಸಿ ಆಕೆಯ ಸಾವಿಗೆ ಕಾರಣಳಾದ ಗೃಹಿಣಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದ ಕೋರ್ಟ್ ವಿಚಾರಣೆ ಪ್ರಸ್ತುತ ನಡೆಯುತ್ತಿದೆ.
ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಪೊಲೀಸರು ಇಂಡೊನೇಷ್ಯ ಮೂಲದ ಮನೆಗೆಲಸದಾಕೆಯ ಮೃತದೇಹವನ್ನು ಆಕೆಯ 61 ವರ್ಷದ ಮಾಲಕಿಯ ಮನೆಯಲ್ಲಿ ಪತ್ತೆ ಹಚ್ಚಿದ್ದರು. ಕೆಲಸದಾಕೆಯ ದೇಹ ಆಹಾರವಿಲ್ಲದೆ ಕೃಶವಾಗಿರುವುದು ಹಾಗೂ ಆಕೆಯ ಮೈಮೇಲೆ ಹಲ್ಲೆಯ ಗುರುತಿರುವುದನ್ನು ಫೊರೆನ್ಸಿಕ್ ತನಿಖೆಯ ವೇಳೆ ತಿಳಿದು ಬಂದಿತ್ತು.
ಮನೆಯ ತುಂಬೆಲ್ಲಾ ಇದ್ದ ರಕ್ತದ ಕಲೆಗಳನ್ನು ಒರೆಸಲಾಗಿತ್ತೆಂಬುದೂ ಪತ್ತೆಯಾಗಿತ್ತೆಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿ ಈ ಹಿಂದೆ ಕೂಡ ತನ್ನ ಮನೆಗೆಲಸದವರ ವಿರುದ್ಧ ಸುಳ್ಳು ದೂರುಗಳನ್ನು ದಾಖಲಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮೇಲಾಗಿ ಮನೆಗೆಲಸದಾಕೆ ಮನೆಯಿಂದ ತಪ್ಪಿಸಿ ಹೋಗದಂತೆ ಮನೆಯ ಹೊರಗೆಲ್ಲಾ ಗೃಹಿಣಿ ಕಬ್ಬಿಣದ ತಂತಿ ಹಾಕಿಸಿದ್ದಳೆನ್ನಲಾಗಿದೆ.
ಆದರೆ ಗೃಹಿಣಿಯ ಮನೆಯಲ್ಲಿ ಕೆಲಸದಾಕೆಗೆ ಸಾಕಷ್ಟು ಆಹಾರ ಇತ್ತು ಹಾಗೂ ಆಹಾರವಿದ್ದ ಫ್ರಿಡ್ಜ್‌ನ ಬೀಗ ಕೂಡ ಹಾಕಿರಲಿಲ್ಲವೆಂದು ಈ ಪ್ರಕರಣದ ಸಾಕ್ಷಿಯಾಗಿರುವ ಆರೋಪಿಯ ಸಹೋದರಿ ಹೇಳಿದ್ದಾಳೆ.