ಕ್ಯಾಲಿಫೋರ್ನಿಯ: ಇತಿಹಾಸ ಪಾಠಪುಸ್ತಕದಿಂದ ‘ದಲಿತ’ ಪದವನ್ನೇ ಕಿತ್ತು ಹಾಕಲು ಹೊರಟ ಹಿಂದುತ್ವ ಸಂಘಟನೆಗಳು
ನ್ಯೂಯಾರ್ಕ್, ಎ. 16: ಅಮೆರಿಕದಲ್ಲಿರುವ ಹಲವು ಬಲಪಂಥೀಯ ಹಿಂದೂ ಸಂಘಟನೆಗಳು ಆರನೆ ಹಾಗೂ ಏಳನೆ ಗ್ರೇಡ್ ಇತಿಹಾಸ ಹಾಗೂ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿ ‘ದಲಿತ’ ಪದ ಕಿತ್ತು ಹಾಕುವಂತೆ ಹಾಗೂ ಹಲವು ಇತರ ಬದಲಾವಣೆ ತರಬೇಕೆಂಬ ಬೇಡಿಕೆಯಿಟ್ಟಿದ್ದರೂ ಸ್ಯಾಕ್ರಮೆಂಟೋದ ಇತಿಹಾಸ ಹಾಗೂ ಸಮಾಜವಿಜ್ಞಾನ ಸಮಿತಿ ಈ ಬೇಡಿಕೆಯನ್ನು ತಿರಸ್ಕರಿಸಿರುವುದು ಹಿಂದೂ ಅಮೆರಿಕನ್ ಫೌಂಡೇಶನ್, ಉಬೆರಾಯ್ ಫೌಂಡೇಶನ್ ಫಾರ್ ರಿಲಿಜಿಯಸ್ ಸ್ಟಡೀಸ್ ಹಾಗೂ ಧರ್ಮ ಸಿವಿಲೈಝೇಶನ್ ಫೌಂಡೇಶನ್ನಿಗೆ ದೊಡ್ಡ ಹಿನ್ನಡೆಯಾಗಿದೆ.
ಕ್ಯಾಲಿಫೋರ್ನಿಯಾದ ಹೊಸ ಪಠ್ಯ ಪುಸ್ತಕಗಳು ಈ ವರ್ಷ ಮುದ್ರಣಗೊಳ್ಳಲಿವೆ. ತರುವಾಯ ಕ್ಯಾಲಿಫೋರ್ನಿಯಾ ಸ್ಟೇಟ್ ಬೋರ್ಡ್ ಆಫ್ ಎಜುಕೇಶನ್ ಪ್ರಸ್ತಾವಿತ ಬದಲಾವಣೆಗಳ ಬಗ್ಗೆ ಮೇ ತಿಂಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಅತ್ತ ಅಂಬೇಡ್ಕರ್ ಅಸೋಸಿಯೇಶನ್ ಆಫ್ ಕ್ಯಾಲಿಫೋರ್ನಿಯಾ, ಎಚ್‌ಎಎಫ್ ಮತ್ತಿತರ ಸಂಘಟನೆಗಳು ಪಠ್ಯಪುಸ್ತಕಗಳಲ್ಲಿ ತರಬೇಕೆಂದು ಹೇಳುತ್ತಿರುವ ಮಾರ್ಪಾಡುಗಳನ್ನು ಬಲವಾಗಿ ವಿರೋಧಿಸುತ್ತಿವೆ. ಭಾರತೀಯ ಇತಿಹಾಸದ ವಾಸ್ತವಗಳನ್ನು ಮುಚ್ಚಿ ಹಾಕಿ, ಜಾತಿ ತಾರತಮ್ಯವಿಲ್ಲವೆಂದು ವಾದಿಸಿ ಪಠ್ಯ ಪುಸ್ತಕಗಳಲ್ಲಿ ‘ದಲಿತ’ ಪದವನ್ನೇ ಕಿತ್ತು ಹಾಕಲು ಹಿಂದೂ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸುತ್ತಾರೆ. ಜಾತಿ ತಾರತಮ್ಯದಿಂದ ಲಕ್ಷಗಟ್ಟಲೆ ಭಾರತೀಯರು ಕಷ್ಟವನ್ನು ಅಭವಿಸಿರುವಾಗ ಇತಿಹಾಸದ ವಾಸ್ತವವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.
ಆದರೆ ಎಚ್‌ಎಎಫ್ ಮತ್ತಿತರ ಹಿಂದುತ್ವ ಸಂಘಟನೆಗಳ ಪ್ರಕಾರ ಜಾತಿ ವ್ಯವಸ್ಥೆ, ದಲಿತರ ಸಮಸ್ಯೆ ಹಾಗೂ ಮಹಿಳೆಯರು ಹಿಂದೆ ಅನುಭವಿಸುತ್ತಿದ್ದ ಅನ್ಯಾಯಗಳ ವಿಚಾರವನ್ನು ಆರನೆ ಗ್ರೇಡ್ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಳವಡಿಸುವ ಅಗತ್ಯವಿಲ್ಲ.
ಆರನೆ ಹಾಗೂ ಏಳನೆ ಗ್ರೇಡ್ ಇತಿಹಾಸ ಪಠ್ಯಪುಸ್ತಕಗಳಲ್ಲಿ ‘ಹಿಂದೂ’ ಅಥವಾ ‘ಇಂಡಿಯಾ’ ಪದಗಳ ಬದಲು ‘ಸೌತ್ ಏಷ್ಯ’ ಪದ ಬಳಸಲು ನಡೆಸಲಾಗುತ್ತಿರುವ ಯತ್ನದ ವಿರುದ್ಧ ಎಚ್‌ಎಎಫ್ ಈಗಾಗಲೇ ಹಲವು ಪ್ರತಿಭಟನೆಗಳನ್ನು ಆಯೋಜಿಸಿದೆ.