×
Ad

ಪಾಕಿಸ್ತಾನದಲ್ಲಿ ಪೊಲೀಸರನ್ನೇ ಅಪಹರಿಸಿ ಒತ್ತೆಯಾಳಾಗಿರಿಸಿದ ಗ್ಯಾಂಗ್: ಬಿಡಿಸಲು ಹೆಣಗಾಡುತ್ತಿರುವ ಸೇನೆ!

Update: 2016-04-16 12:44 IST

ಪಂಜಾಬ್/ಪಾಕಿಸ್ತಾನ, ಎ.16: ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಒಂದು ನದಿಯ ದ್ವೀಪ ಪ್ರದೇಶದಲ್ಲಿ ಹತ್ತು ದಿನ ಮೊದಲು ಚೋಟು ಗ್ಯಾಂಗ್ ಒತ್ತೆಯಾಳಾಗಿರಿಸಿದ 24 ಪೊಲೀಸ್ ಅಧಿಕಾರಿಗಳ ಬಿಡುಗಡೆಗೆ ಭದ್ರತಾ ಪಡೆ ಕಾರ್ಯಾಚರಿಸುತ್ತಿದೆ ಎಂದು ವರದಿಯಾಗಿದೆ.
ವರದಿಯಾಗಿರುವ ಪ್ರಕಾರ ಈ ಪ್ರದೇಶ ಶತಮಾನಗಳಿಂದ ಡಕಾಯಿತರು, ಗೂಂಡಾಗಳ ಅಡ್ಡೆಯಾಗಿದೆ. ಅಧಿಕಾರಿಗಳ ಬಿಡುಗಡೆಗಾಗಿ ನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ ಇದುವರೆಗೆ ಆರು ಪೊಲೀಸರು ಬಲಿಯಾಗಿದ್ದಾರೆ. ಈಗ ಪೊಲೀಸರ ನೆರವಿಗಾಗಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಈ ಗ್ಯಾಂಗ್‌ನ ಮುಖ್ಯಸ್ಥ ಗುಲಾಮ್ ರಸೂಲ್ ಎಂಬಾತ ಶುಕ್ರವಾರ, ಪೊಲೀಸರ ಮುಂದೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಸೈನ್ಯವನ್ನು ತಾನು ಗೌರವಿಸುತ್ತಿದ್ದು, ಅದರ ಮುಂದೆ ಶರಣಾಗಲು ಸಿದ್ಧ ಎಂದು ಆತ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅವನ ಗ್ಯಾಂಗ್ ಬಂಧಿಸಿಟ್ಟ ಪೊಲೀಸರನ್ನು ಬಿಡಿಸಲಿಕ್ಕಾಗಿ 1500 ಸೈನಿಕರನ್ನು ಈಗ ನಿಯೋಜಿಸಲಾಗಿದೆ. ಸೇನೆ ಅಲ್ಲಿ ಹೆಲಿಕಾಪ್ಟರ್ ಗನ್‌ಶಿಪ್‌ನ್ನೂ ಸಜ್ಜುಗೊಳಿಸಿಟ್ಟಿದೆ. ವಾರ್ತಾ ಸಂಸ್ಥೆ ರಾಯಿಟರ್ಸ್‌ನ ಪ್ರಕಾರ ಪಂಜಾಬ್ ಕಾನೂನು ಸಚಿವ ರಾಣಾ ಸನಾವುಲ್ಲಾ ಪಾಕಿಸ್ತಾನಿ ಟಿವಿಗೆ, ಈ ಗ್ಯಾಂಗ್ ಓಡಿ ಪಾರಾಗಲು ಬಿಡಲಾರೆವು ಮತ್ತು ಯಾವುದೇ ರಾಜಿ ಪಂಚಾಯಿತಿಗೂ ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ಅವರೋ ಒಂದೋ ಶರಣಾಗಬೇಕು ಇಲ್ಲದಿದ್ದರೆ ಮುಂದಿನ 48 ಗಂಟೆಗಳಲ್ಲಿ ಅವರ ಸರ್ವನಾಶ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಪೊಲೀಸರ ಬಳಿ ಈ ಕಾರ್ಯಾಚರಣೆಗೆ ಸೂಕ್ತ ಶಸ್ತ್ರಾಸ್ತ್ರ ಮತ್ತು ನಾವೆಗಳು ಇರಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಡಾನ್ ಪತ್ರಿಕೆಗೆ ತಿಳಿಸಿದ್ದಾರೆ.
ಪಂಜಾಬ್ ಪಾಕಿಸ್ತಾನದ ಬಹುದೊಡ್ಡ ಜನಸಂಖ್ಯೆ ಇರುವ ಮತ್ತು ಶ್ರೀಮಂತ ಪ್ರಾಂತವಾಗಿದೆ. ಇಲ್ಲಿ ನವಾಝ್ ಶರೀಫ್‌ರ ಪ್ರಭಾವವೂ ಇದೆ. ರಾಜನ್‌ಪುರ ಮತ್ತು ರಹೀಂಯಾರ್‌ಖಾನ್ ಜಿಲ್ಲೆಯ ನಡುವೆ ದಟ್ಟ ಕಾಡನ್ನೊಳಗೊಂಡ ದ್ವೀಪದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಈ ಪ್ರದೇಶ ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತಕ್ಕೆ ಜೋಡಿಸಿಕೊಂಡಿವೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News