ಬಿಟ್ಟು ಬಂದ ಪರ್ಸ್ ತರಲು ಹೆಲಿಕಾಪ್ಟರ್ ಕಳಿಸಿದ ಗವರ್ನರ್!

Update: 2016-04-16 09:19 GMT

ವಾಶಿಂಗ್ಟನ್, ಎ. 16: ಅಮೆರಿಕದ ಅಲಬಾಮ ರಾಜ್ಯದ ಗವರ್ನರ್ ರಾಬರ್ಟ್ ಬೆಂಟ್ಲೆ ತಾನು ಮರೆತು ಬಂದ ಪರ್ಸನ್ನು ತರಲು ಪೊಲೀಸ್ ಹೆಲಿಕಾಪ್ಟರನ್ನು ಬಳಸಿದ ಘಟನೆಯೊಂದು ವರದಿಯಾಗಿದೆ. ಈ ಕಾರ್ಯಾಚರಣೆಗೆ ತೆರಿಗೆದಾರರ 4,000 ಡಾಲರ್ (ಸುಮಾರು 2,66,000 ರೂಪಾಯಿ) ಹಣವನ್ನು ವ್ಯಯಿಸಲಾಯಿತು.

2014ರ ಉತ್ತರಾರ್ಧದಲ್ಲಿ ರಾಬರ್ಟ್ ಬೆಂಟ್ಲೆ ಟಸ್ಕಲೂಸದಿಂದ ತನ್ನ ಬೀಚ್ ಮನೆಗೆ ತೆರಳಿದರು. ಅದು ಐದು ಗಂಟೆಗಳ ರಸ್ತೆ ಪ್ರಯಾಣವಾಗಿತ್ತು. ಆದರೆ, ಅವರು ಪರ್ಸನ್ನು ಮರೆತು ಬಂದರು.

ಹಾಗಾಗಿ, ಪರ್ಸನ್ನು ತಂದುಕೊಡುವಂತೆ ಅವರು ತನ್ನ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಇದಕ್ಕಾಗಿ ರಾಜ್ಯ ಪೊಲೀಸ್ ಹೆಲಿಕಾಪ್ಟರನ್ನು ಬಳಸಲಾಯಿತು ಎಂಬುದಾಗಿ ಹಾರಾಟ ದಾಖಲೆಗಳು ಹೇಳುತ್ತವೆ.

ಪರ್ಸನ್ನು ಹೆಲಿಕಾಪ್ಟರ್‌ನಲ್ಲಿ ತರುವಂತೆ ತಾನು ಸೂಚಿಸಿಲ್ಲ ಎಂದು ಈಗಾಗಲೇ ಲೈಂಗಿಕ ಹಗರಣವೊಂದಕ್ಕೆ ಸಂಬಂಧಿಸಿ ರಾಜೀನಾಮೆ ನೀಡಬೇಕೆಂಬ ಒತ್ತಡ ಎದುರಿಸುತ್ತಿರುವ ಬೆಂಟ್ಲಿ ಹೇಳುತ್ತಾರೆ. ‘‘ನನ್ನ ಪರ್ಸ್ ತರುವಂತೆ ನಾನು ಅವರಲ್ಲಿ ವಿನಂತಿಸಿದೆ. ಅದನ್ನು ಅವರು ಹೇಗೆ ತಂದರು ಎಂದು ನನಗೆ ಗೊತ್ತಿಲ್ಲ’’ ಎಂದು ಗವರ್ನರ್ ಹೇಳಿದರು. ‘‘ಹೆಲಿಕಾಪ್ಟರ್‌ನಲ್ಲಿ ತನ್ನಿ ಎಂದು ನಾನು ಹೇಳಿರಲಿಲ್ಲ’’ ಎಂದರು.

‘‘ಭದ್ರತಾ ಕಾರಣಗಳಿಗಾಗಿ ನಮ್ಮ ಪರ್ಸ್ ನಮ್ಮಲ್ಲಿ ಇರಬೇಕು. ನಾನು ಗವರ್ನರ್. ನನಗೆ ಹಣ ಬೇಕಾಗಿತ್ತು. ಏನಾದರೂ ತಿನ್ನಲು ನಾನು ಖರೀದಿಸಬೇಕಾಗಿತ್ತು’’ ಎಂದು ಅಲಬಾಮ ಗವರ್ನರ್ ಹೇಳುತ್ತಾರೆ.

ಅಲಬಾಮ ಕಾನೂನು ಅನುಷ್ಠಾನ ಸಂಸ್ಥೆಯ ಮುಖ್ಯಸ್ಥರು ಹೆಲಿಕಾಪ್ಟರ್ ಘಟನೆಯ ಬಗ್ಗೆ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ.

ಹೆಲಿಕಾಪ್ಟರನ್ನು ಬಳಸಲು ಗವರ್ನರ್‌ರ ಮಾಜಿ ಅಂಗರಕ್ಷಕನಿಂದ ತಾನು ಅನುಮತಿ ಪಡೆದಿದ್ದೇನೆ ಎಂದು ಒಬ್ಬರು ಹೇಳಿದರೆ, ತನಗೆ ಪರ್ಸ್ ಬಗ್ಗೆ ಯಾರೂ ಏನೂ ಹೇಳಿರಲಿಲ್ಲ ಹಾಗೂ ಹೆಲಿಕಾಪ್ಟರ್ ಬಳಕೆಗೆ ತಾನು ಅನುಮತಿ ನೀಡಿರಲಿಲ್ಲ ಎಂದು ಇನ್ನೊಬ್ಬರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News