ಸೀಟು ಬದಲಾಯಿಸಿದ್ದಕ್ಕೆ ಮುಸ್ಲಿಂ ಮಹಿಳೆಯನ್ನು ವಿಮಾನದಿಂದಲೇ ಇಳಿಸಿದರು !
ಷಿಕಾಗೊ,ಎ.16: ಸಹ ಪ್ರಯಾಣಿಕನೊಂದಿಗೆ ತನ್ನ ಸೀಟನ್ನು ಬದಲಾಯಿಸಿಕೊಳ್ಳಲು ಬಯಸಿದ್ದ ಮುಸ್ಲಿಮ್ ಮಹಿಳೆಯನ್ನು ಯಾವುದೇ ವಿವರಣೆಯನ್ನು ನೀಡದೆ ವಿಮಾನದಿಂದ ಕೆಳಗಿಳಿಸಿದ ಘಟನೆ ಷಿಕಾಗೊ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮಹಿಳೆ ಸೋಮಾಲಿ ಮೂಲದವಳಾಗಿದ್ದು, ಶಿರವಸ್ತ್ರವನ್ನು ಧರಿಸಿದ್ದಳು. ಹೀಗಾಗಿ ಜನಾಂಗೀಯ ತಾರತಮ್ಯದ ಸಾಧ್ಯತೆಯ ಬಗ್ಗೆ ತನಿಖೆ ನಡೆಸುವಂತೆ ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್(ಸಿಎಐಆರ್) ಆಗ್ರಹಿಸಿದೆ.
ಮೇರಿಲ್ಯಾಂಡ್‌ನ ಹಕೀಮಾ ಅಬ್ದುಲ್ಲೆ ಎಂಬ ಈ ಮಹಿಳೆ ಸಿಯಾಟಲ್‌ನಲ್ಲಿರುವ ತನ್ನದೇ ಕುಟುಂಬದ ಗರ್ಭಿಣಿ ಮಹಿಳೆಗೆ ನೆರವಾಗಲು ಅಲ್ಲಿಗೆ ಪ್ರಯಾಣಿಸಲೆಂದು ಷಿಕಾಗೊ ವಿಮಾನ ನಿಲ್ದಾಣದಲ್ಲಿ ಸೌಥ್‌ವೆಸ್ಟ್ ಏರ್‌ಲೈನ್ಸ್‌ನ ವಿಮಾನವನ್ನು ಹತ್ತಿದ್ದಳು. ಸಹ ಪ್ರಯಾಣಿಕನೊಂದಿಗೆ ತನ್ನ ಸೀಟನ್ನು ಬದಲಾಯಿಸಿಕೊಳ್ಳಲು ಬಯಸಿದ್ದು,ಆತನೂ ಒಪ್ಪಿಕೊಂಡಿದ್ದ. ಆಕೆ ತನ್ನ ಸೀಟಿನಿಂದ ಎದ್ದಾಗ ಬಳಿ ಬಂದ ಫ್ಲೈಟ್ ಅಟೆಂಡೆಂಟ್, ಸೀಟುಗಳನ್ನು ಬದಲಿಸಿಕೊಳ್ಳಲು ಅವಕಾಶವಿಲ್ಲ ಎಂದಾಗ ಹಕೀಮಾ ಅದನ್ನು ಪ್ರಶ್ನಿಸಿದ್ದಳು. ಸೂಕ್ತ ಉತ್ತರ ನೀಡದ ಫ್ಲೈಟ್ ಅಟೆಂಡೆಂಟ್ ಆಕೆಯನ್ನು ವಿಮಾನದಿಂದ ಕೆಳಗಿಳಿಸಿದ್ದಾನೆ.
ಗೇಟಿನಲ್ಲಿದ್ದ ಪೊಲೀಸರು ಆಕೆಯನ್ನು ವಿಮಾನದಿಂದ ಕೆಳಗಿಳಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದಾಗ,ಇಲ್ಲ...ಆಕೆಗೆ ಸಹ ಪ್ರಯಾಣಿಕನೊಂದಿಗೆ ಹೊಂದಿಕೊಳ್ಳಲಾಗುತ್ತಿಲ್ಲ ಎಂದು ಆತ ಉತ್ತರಿಸಿದ್ದಾನೆ.
ಈ ಘಟನೆ ನಡೆದ ಎಷ್ಟೋ ಗಂಟೆಗಳ ಬಳಿಕ ಹಕೀಮಾ ಬೇರೊಂದು ವಿಮಾನದಲ್ಲಿ ತನ್ನ ಯಾನವನ್ನು ಮುಂದುವರಿಸುವಂತಾಗಿತ್ತು.
ಈ ಕೆಟ್ಟ ಅನುಭವದಿಂದಾಗಿ ಹಕೀಮಾ ಸಂಪೂರ್ಣ ಹತಾಶಳಾಗಿದ್ದಳು. ವಿಮಾನದಲ್ಲಿದ್ದ ಅಷ್ಟೂ ಪ್ರಯಾಣಿಕರೆದುರು ಆಕೆಯನ್ನು ಅವಮಾನಿಸಲಾಗಿದೆ ಎಂದಿರುವ ಸಿಎಐಆರ್‌ನ ಝೈನಾಬ್ ಚೌದ್ರಿ ಈ ಬಗ್ಗೆ ತನಿಖೆಗೆ ಮತ್ತು ವಿಮಾನ ಯಾನ ಸಂಸ್ಥೆಯಿಂದ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಅಲ್ಲದೆ ಹಕೀಮಾರ ಯಾನದ ಶುಲ್ಕವನ್ನು ಮರಳಿಸುವಂತೆಯೂ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತನ್ನ ಪತ್ನಿಯ ಪರವಾಗಿ ಮಾತನಡಿದ ಹಕೀಮಾಳ ಪತಿ ಅಬುಕರ್ ಫದಾವ್ ಅವರು,ತನ್ನ ಪತ್ನಿ ಕಳವಳಗೊಂಡಿದ್ದಾಳೆ. ಅವಳು ಅತ್ತರೂ ಆಕೆಯ ಮೊರೆಯನ್ನು ಕೇಳಲಾಗಿರಲಿಲ್ಲ ಎಂದು ಆಪಾದಿಸಿದ್ದಾರೆ. ಆಕೆಯ ಧರ್ಮ ಮತ್ತು ವೇಷಭೂಷಣಗಳ ಕಾರಣದಿಂದ ಆಕೆಯನ್ನು ಅವಮಾನಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.