ಇಕ್ವೆಡಾರ್‌ನಲ್ಲಿ 7.8 ರಿಕ್ಟರ್ ಮಾಪಕದ ಪ್ರಬಲ ಭೂಕಂಪ
ಇಕ್ವೆಡಾರ್, ಎ.17: ಇಲ್ಲಿನ ಕೇಂದ್ರ ಕರಾವಳಿ ಪ್ರದೇಶದಲ್ಲಿ ಶನಿವಾರ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀರತೆ 7.8 ದಾಖಲಾಗಿದೆ. ರಾಜಧಾನಿ ಕ್ವಿಟೊದಿಂದ ದೂರದಲ್ಲಿ ಈ ಭೂಕಂಪ ಉಂಟಾಗಿದ್ದು, ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ ಎಂದು ಆರಂಭಿಕ ವರದಿಗಳು ಹೇಳಿವೆ. ಭೂಕಂಪದ ತೀವ್ರತೆಗೆ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಅಸಂಖ್ಯಾತ ಮನೆಗಳು ನೆಲಸಮವಾಗಿವೆ. ಅಮೆರಿಕದ ಭೂಗರ್ಶಾಸ್ತ್ರ ಸರ್ವೆ ಅಧಿಕಾರಿಗಳ ಪ್ರಕಾರ, ಈ ಭೂಕಂಪದ ಕೇಂದ್ರ ಬಿಂದು ಇಕ್ವೆಡಾರ್‌ನ ಮುಯ್ಸಿನ್ ಪಟ್ಟಣದಿಂದ 27 ಕಿಲೋಮೀಟರ್ ಆಗ್ನೇಯಕ್ಕೆ ಇದೆ. ಇದು ಜನನಿಬಿಡ ಪ್ರದೇಶವಾಗಿದ್ದು, ಮೀನುಗಾರಿಕಾ ಬಂದರು ಹಾಗೂ ಜನಪ್ರಿಯ ಪ್ರವಾಸಿ ತಾಣ ಆಗಿದೆ. 19 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದ್ದು, ಮೊದಲು ಇದರ ತೀವ್ರತೆ 7.4 ಎಂದು ಹೇಳಲಾಗಿತ್ತು. ಬಳಿಕ 7.8 ಎಂದು ನಿಖರವಾಗಿ ಹೇಳಲಾಗಿದೆ.
ಕೆಲ ಕರಾವಳಿ ಪ್ರದೇಶಗಳಲ್ಲಿ ಭೀಕರ ಸುನಾಮಿ ಸಂಭವಿಸುವ ಸಾಧ್ಯತೆಯಿದೆ ಎಂದು ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ಹೇಳಿದೆ. ಕ್ವಿಟೊದಲ್ಲಿ ಸುಮಾರು 40 ಸೆಕೆಂಡ್ ಕಾಲ ಭೂಮಿ ಕಂಪಿಸಿತು. ಜನ ಭಯದಿಂದ ಕಟ್ಟಡಗಳಿಂದ ಹೊರಬಂದರು. ಕ್ವಿಟೊ ನಗರ ಭೂಕಂಪ ಸಂವಿಸಿದ ಸ್ಥಳದಿಂದ 170 ಕಿಲೋಮೀಟರ್ ದೂರದಲ್ಲಿದೆ. ಎಲ್ಲ ವಿದ್ಯುತ್ ಸಂಪರ್ಕ ಹಾಗೂ ಮೊಬೈಲ್ ಸಂಪರ್ಕಕ್ಕೆ ಧಕ್ಕೆ ಉಂಟಾಗಿದೆ.