ಮೆಲ್ಬೋನ್- ದಿಲ್ಲಿ ಏರ್‌ಇಂಡಿಯಾ ಡ್ರೀಮ್‌ಲೈನರ್ ವಿಮಾನವನ್ನು ಸಿಂಗಾಪುರಕ್ಕೆ ತಿರುಗಿಸಿದ...
ಹೊಸದಿಲ್ಲಿ: ಏರ್‌ಇಂಡಿಯಾದ ಡ್ರೀಮ್‌ಲೈನರ್‌ನಲ್ಲಿ ಒಬ್ಬ ಅನಪೇಕ್ಷಿತ ಅತಿಥಿ. ಆಗಾಗ ಕಣ್ಣುಮುಚ್ಚಾಲೆಯಾಡುವ ಇಲಿಯೊಂದು ಒಂದು ತಿಂಗಳಲ್ಲಿ ಮೂರು ಬಾರಿ ವಿಮಾನ ಹಾರಾಟಕ್ಕೆ ತಡೆ ಉಂಟುಮಾಡಿದೆ. ಇಂಥ ಕೊನೆಯ ನಿದರ್ಶನ ವರದಿಯಾಗಿರುವುದು ಶನಿವಾರ. 1,500 ಕೋಟಿ ರೂಪಾಯಿ ಮೌಲ್ಯದ ಈ ವಿಮಾನದಲ್ಲಿ ಹೊಗೆಯಾಡಿಸಿದ್ದು, ಇಲಿ ಬೋನು ಅಳವಡಿಸಿದ್ದು ಹೀಗೆ ಎಲ್ಲ ಕಸರತ್ತೂ ಮಡಲಾಗಿದೆ. ಆದರೆ ಮೂಷಿಕ ಪವಾಡ ಮಾತ್ರ ಮುಂದುವರಿದೇ ಇದೆ. ಒಂದರ ಬದಲಾಗಿ ಮತ್ತೊಂದು ವಿಮಾನ ಏರಿಕೊಂಡಿದೆ.
ಇದು ಪತ್ತೆಯಾದದ್ದು ಶನಿವಾರ ಮೆಲ್ಬೋರ್ನ್-ದೆಹಲಿ ವಿಮಾನದಲ್ಲಿ. ಮೇಲ್ಬೋರ್ನ್‌ನಿಂದ ಈ ವಿಮಾನ (ಎಐ309) ಬೆಳಿಗ್ಗೆ 6ಕ್ಕೆ ಹೊರಟಿತು. ಆರು ಗಂಟೆ ಹಾರಾಟದ ಬಳಿಕ ಇಲಿ ಕಂಡುಬಂತು. ತಕ್ಷಣ ವಿಮಾನವನ್ನು ಸಿಂಗಾಪುರಕ್ಕೆ ತಿರುಗಿಸಲಾಯಿತು. ಮಧ್ಯಾಹ್ನ 1ರ ವೇಳೆಗೆ ವಿಮಾನ ಸಿಂಗಾಪುರದಲ್ಲಿ ಇಳಿಯಿತು. ಬಳಿಕ ಪ್ರಯಾಣಿಕರಿಗೆ ದೆಹಲಿಗೆ ತೆರಳಲು ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಯಿತು.
ಅಧಿಕಾರಿಗಳ ಪ್ರಕಾರ, ಎರಡು ವಾರಗಳ ಹಿಂದೆ ಬರ್ಮಿಂಗ್‌ಹ್ಯಾಂ- ದೆಹಲಿ ವಿಮಾನದಲ್ಲಿ ಮೊದಲ ಬಾರಿಗೆ ಇಲಿ ಪತ್ತೆಯಾಗಿತ್ತು. ಮತ್ತೆ ಏಪ್ರಿಲ್ 11ರಂದು ದೆಹಲಿ- ಫ್ರಾಂಕ್‌ಫರ್ಟ್ ವಿಮಾನದಲ್ಲಿ ಹೆಗ್ಗಣ ಪತ್ತೆಯಾಯಿತು. ಬಳಿಕ ವಿಮಾನದಲ್ಲಿ ಹೊಗೆಯಾಡಿಸಿ, ಬೇರೆ ವಿಮಾನದಲ್ಲಿ ಪ್ರಯಾಣಿಕರನ್ನು ಜರ್ಮನಿಗೆ ಕಳುಹಿಸಲಾಗಿತ್ತು. ಇದೀಗ ಮೂರನೆ ಬಾರಿ ಶನಿವಾರ ಮತ್ತೊಂದು ಅಂಥ ಘಟನೆ ಬೆಳಕಿಗೆ ಬಂದಿದೆ.