ಇಕ್ವೆಡಾರ್ ರಾಜಧಾನಿ ಕ್ವಿಟೋದಲ್ಲಿ ಪ್ರಬಲ ಭೂಕಂಪಕ; 41 ಮಂದಿ ಬಲಿ; ಸುನಾಮಿ ಭೀತಿ
Update: 2016-04-17 10:09 IST
ಕ್ವಿಟೋ, ಎ.17: ವಾಯುವ್ಯ ದಕ್ಷಿಣ ಅಮೆರಿಕಾದ ಇಕ್ವೆಡಾರ್ ನ ಕ್ವಿಟೋದಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ 41ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ.
ಕ್ವಿಟೋ ಕರಾವಳಿ ತೀರದಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿತು. ಮೊದಲು 4.8 ತೀವ್ರತೆಯ ಭೂಕಂಪ ಸಂಭವಿಸಿತು. ಬಳಿಕ ಅದೇ ಪ್ರದೇಶದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತು ಎಂದು ತಿಳಿದು ಬಂದಿದೆ. ರಾಜಧಾನಿ ಕ್ವಿಟೋದಿಂದ ಸುಮಾರು 173 ಕಿ.ಮೀ ಸಮೀಪದಲ್ಲೇ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಇದರಿಂದಾಗಿ ಇಕ್ವೆಡಾರ್ ಮತ್ತು ಕೊಲಂಬಿಯಾ ಕರಾವಳಿ ತೀರ ಪ್ರದೇಶದಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆಗಳಿವೆ ಎಂದು ಫೆಸಿಫಿಕ್ ಸುನಾಮಿ ಕೇಂದ್ರ ಎಚ್ಚರಿಕೆ ನೀಡಿದೆ.