ಹೊಟ್ಟೆಯಲ್ಲಿ ಹೆರಾಯಿನ್: ಜಿದ್ದಾ ವಿಮಾನ ನಿಲ್ದಾಣದಲ್ಲಿ ಬಂಧನ
ಜಿದ್ದಾ: 699 ಗ್ರಾಂ ಹೆರಾಯಿನ್ ಹಾಗೂ 65,265 ಕ್ಯಾಪ್ಟಗಾನ್ ಕ್ಯಾಪ್ಸೂಲ್‌ಗಳನ್ನು ಕಳ್ಳಸಾಗಾಣಿಕೆ ಮಾಡುವ ಪ್ರಯತ್ನವನ್ನು ಬೇಧಿಸುವಲ್ಲಿ ಇಲ್ಲಿನ ಕಿಂಗ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಒಬ್ಬ ಪ್ರಯಾಣಿಕನ ಹೊಟ್ಟೆಯಲ್ಲಿ ಹೆರಾಯಿನ್ ಪತ್ತೆ ಮಾಡಲಾಗಿದ್ದು, ಕ್ಯಾಪ್ಟಗಾನ್ ಕ್ಯಾಪ್ಸೂಲ್‌ಗಳನ್ನು ನೀರಿನ ಪಂಪ್‌ನ ಒಳಗಡೆ ಹುದುಗಿಸಿ ಇಡಲಾಗಿತ್ತು ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಮಹಾನಿರ್ದೇಶಕ ಅಬ್ದುಲ್ ಅಲ್ ಪಲಾಯಿ ಹೇಳಿದ್ದಾರೆ.
ವಿಮಾನ ಆಗಮಿಸಿದ ಬಳಿಕ ನಡೆಸುವ ಮಾಮೂಲಿ ತಪಾಸಣೆ ವೇಳೆ, ಇದು ಪತ್ತೆಯಾಗಿವೆ. ಇಬ್ಬ ವ್ಯಕ್ತಿಯ ಬಗ್ಗೆ ಸಂಶಯಗೊಂಡ ಅಧಿಕಾರಿಗಳು ಆತನನ್ನು ಬಂಧಿಸಿ ತೀವ್ರ ತಪಾಸಣೆಗೆ ಗುರಿಪಡಿಸಿದಾಗ, ಆತನ ಹೊಟ್ಟೆಯಲ್ಲಿ ಹುದುಗಿಸಿ ಇಟ್ಟುಕೊಂಡಿದ್ದ 92 ಹೆರಾಯಿನ್ ಕ್ಯಾಪ್ಸೂಲ್ ಪತ್ತೆಯಾಯಿತು ಎಂದು ವಿವರಿಸಿದ್ದಾರೆ.
ಸರಕಿನ ಜತೆ ನೀರೆತ್ತುವ ಪಂಪ್ ಇದೆ ಎಂದು ಇನ್ನೊಬ್ಬ ಪ್ರಯಾಣಿಕ ಹೇಳಿಕೆ ನೀಡಿದ. ಆದರೆ ಅನುಮಾನಗೊಂಡ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಪಂಪ್‌ನ ಒಳಗೆ ಬಾರಿ ಪ್ರಮಾಣದ ಕ್ಯಾಪ್ಟಗಾನ್ ಕ್ಯಾಪ್ಸೂಲ್‌ಗಳು ಪತ್ತೆಯಾದವು. ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.