×
Ad

ಪೂರಂನಲ್ಲಿ ಆನೆಗಳಿಗೆ ಚಿತ್ರಹಿಂಸೆ ಪ್ರಾಣಿಪ್ರೇಮಿಗಳ ಆರೋಪ

Update: 2016-04-17 23:56 IST

ತಿರುವನಂತಪುರಂ, ಎ.17: ರವಿವಾರ ಆರಂಭಗೊಂಡಿರುವ ಪ್ರಸಿದ್ಧ ತ್ರಿಶೂರ್ ಪೂರಂ ಉತ್ಸವದಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಲಿರುವ ಆನೆ ಗಳ ಆರೋಗ್ಯ ತಪಾಸಣೆಗೆಂದು ಆಗಮಿಸಿರುವ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(ಎಡಬ್ಲೂಬಿಐ)ಯ ತಜ್ಞರ ತಂಡಕ್ಕೆ ತಡೆಯೊಡ್ಡಲಾಗಿದೆ ಎಂದು ಪ್ರಾಣಿಗಳ ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ.

36ಗಂಟೆಗಳ ಕಾಲ ನಡೆಯುವ ಈ ಉತ್ಸವದಲ್ಲಿ 79 ಆನೆಗಳನ್ನು ಸುಡುಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಅವುಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

ಎಡಬ್ಲೂಬಿಐನಿಂದ ನೇಮಕಗೊಂಡಿರುವ ಆರು ಪಶುವೈದ್ಯರನ್ನೊಳಗೊಂಡ ತಂಡಕ್ಕೆ ಆನೆಗಳ ವೈದ್ಯಕೀಯ ತಪಾಸಣೆ ನಡೆಸದಂತೆ ಶನಿವಾರ ರಾಜ್ಯ ಪಶು ಸಂಗೋಪನಾ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು,ಜಿಲ್ಲಾಧಿಕಾರಿ ಮತ್ತು ಪೊಲೀಸರು ತಡೆಯೊಡ್ಡಿದ್ದಾರೆಂದು ತ್ರಿಶೂರಿನ ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್‌ನ ಕಾರ್ಯದರ್ಶಿ ವಿ.ಕೆ.ವೆಂಕಟಾಚಲಂ ದೂರಿದ್ದಾರೆ.

ಅಧಿಕಾರ ದುರುಪಯೋಗಕ್ಕಾಗಿ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಸರಕಾರದ ಅಧೀನದಲ್ಲಿರುವ ಪ್ರಾಜೆಕ್ಟ್ ಎಲಿಫಂಟ್‌ನ ನಿರ್ದೇಶಕರಿಗೆ ಅವರು ಪತ್ರವನ್ನೂ ಬರೆದಿದ್ದಾರೆ.

ಕೇರಳದ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾಮಟ್ಟದ ಆನೆ ನಿಗಾ ಸಮಿತಿಯನ್ನು ಎಡಬ್ಲೂಬಿಐನಿಂದ ನಾಮಕರಣಗೊಂಡ ಓರ್ವ ಸದಸ್ಯರನ್ನು ಸೇರಿಸಿಕೊಂಡು ಪುನರ್‌ರಚಿಸುವಂತೆ ಮತ್ತು ಪ್ರತಿ ಜಿಲ್ಲೆಯಲ್ಲಿಯೂ ನಡೆಯುವ ಆನೆಗಳ ಮೆರವಣಿಗೆಗೆ ಈ ಸಮಿತಿಯಿಂದ ಕಡ್ಡಾಯವಾಗಿ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತನ್ನ ಪತ್ರ ದಲ್ಲಿ ಅವರು ಉಲ್ಲೇಖಿಸಿದ್ದಾರೆ. ಆನೆಗಳ ಆರೋಗ್ಯ ಸ್ಥಿತಿಯ ತಪಾಸಣೆ ನಡೆಸಲು ಎಡಬ್ಲೂಬಿಐ ತಂಡಕ್ಕೆ ಅವಕಾಶ ನೀಡದಿರುವುದನ್ನು ಪೆಟಾ ಇಂಡಿಯಾ ಕೂಡ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News