ಬರಪೀಡಿತ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸಚಿವೆ ಪಂಕಜಾರ ಸೆಲ್ಫಿ ಗೀಳು!
ಮುಂಬೈ: ಮಹಾರಾಷ್ಟ್ರದ ವಿವಾದಾತ್ಮಕ ಸಚಿವೆ ಪಂಕಜಾ ಮುಂಡೆ ಮತ್ತೊಂದು ವಿವಾದದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ತೀವ್ರ ಬರದಿಂದ ಕಂಗೆಟ್ಟಿರುವ ಲಾತೂರ್‌ನಲ್ಲಿ ಸೆಲ್ಫಿ ಚಿತ್ರಿಸಿಕೊಂಡಿರುವ ಕ್ರಮವನ್ನು ಸಮರ್ಥಿಸುವ ರೀತಿಯಲ್ಲಿ ನಂಬಲಸಾಧ್ಯ ಹೇಳಿಕೆ ನೀಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಭಾಗದಲ್ಲಿ ಸ್ಥಳೀಯ ಆಡಳಿತ ಮಾಡಿದ ಉತ್ತಮ ಕಾರ್ಯವನ್ನು ಶ್ಲಾಘಿಸುವ ಸಲುವಾಗಿ ಸೆಲ್ಫಿ ತೆಗೆಸಿಕೊಂಡಿರುವುದಾಗಿ 36 ವರ್ಷದ ಈ ಸಚಿವೆ ಸಮರ್ಥನೆ ಮಾಡಿಕೊಂಡಿದ್ದಾರೆ.
"ಈ ಚಿತ್ರಗಳು ಸರ್ಕಾರ ಹಾಗೂ ಸ್ಥಳೀಯ ಜನರು ಸಹಭಾಗಿತ್ವದಿಂದ ನಡೆಸಿದ ಕಾರ್ಯಗಳನ್ನು ಬಿಂಬಿಸುವಂಥವು. ಇದು ನನ್ನ ಇಲಾಖೆ. ನಾನು ಮೊದಲ ದಿನದಿಂದಲೂ ತೃಪ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಇದೀಗ ಮಳೆಬಂದರೆ ನಾವು ಸಿದ್ಧರಿದ್ದೇವೆ" ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮಿತ್ರಪಕ್ಷವಾದ ಶಿವಸೇನೆ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್‌ನಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಸಚಿವೆಯ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ.
"ಇಂಥ ಗಂಭೀರ ಪರಿಸ್ಥಿತಿಯಲ್ಲೂ ಸಚಿವರು ಸೆಲ್ಫಿ ಗೀಳಿಗೆ ಅಂಟಿಕೊಂಡಿದ್ದಾರೆ. ಇಂಥದ್ದನ್ನು ಮಾಡುವ ಮೊದಲು ಯೋಚಿಸಬೇಕು. ಪಂಕಜಾ ಮುಂಡೆ ಇದನ್ನು ಇನ್ನಾದರೂ ನಿಲ್ಲಿಸಬೇಕು" ಎಂದು ಶಿವಸೇನೆಯ ಮುಖಂಡ ಮನಿಷಾ ಕಯಾಂಡೆ ಹೇಳಿದ್ದಾರೆ. ಬಿಜೆಪಿ ಇಡಿಯಾಗಿ ಸೆಲ್ಫಿ ಹಾಗೂ ಆಪ್ಟಿಕ್ಸ್ ಪಕ್ಷ. ಇದು ಬರ ಪರಿಸ್ಥಿತಿಯ ಅಣಕ" ಎಂದು ಕಾಂಗ್ರೆಸ್ ಟೀಕಿಸಿದೆ.
ಇದಕ್ಕೂ ಮುನ್ನ ಕಳೆದ ವಾರ ದೇವೇಂದ್ರ ಫಡ್ನವೀಸ್ ಸರ್ಕಾರದ ಕಂದಾಯ ಸಚಿವ, ಭೀಕರ ಬರದಿಂದ ಕಂಗೆಟ್ಟಿರುವ ಲಾತೂರ್‌ಗೆ ಭೇಟಿ ನೀಡುವ ಸಲುವಾಗಿ ಅಲ್ಲಿನ ಹೆಲಿಪ್ಯಾಡ್‌ಗೆ 10 ಸಾವಿರ ಲೀಟರ್ ನೀರು ಹಾಯಿಸಿ ಆಕ್ರೋಶಕ್ಕೆ ಗುರಿಯಾಗಿದ್ದರು.