ಕನ್ಹಯ್ಯಾ ಕುಮಾರ್ ಹಾಸ್ಟೆಲ್‌ಮೇಟ್ ಮೊಯ್ಸಿನ್ ಪಟ್ಟಾಂಬಿ ಕ್ಷೇತ್ರಕ್ಕೆ ಸಿಪಿಐ ಅಭ್ಯರ್ಥಿ
ಹೊಸದಿಲ್ಲಿ, ಎ.18: ಜೆಎನ್ ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹೇಯಾ ಕುಮಾರ್ ಅವರ ಹಾಸ್ಟೆಲ್‌ಮೇಟ್ ಮುಹಮ್ಮದ್ ಮೊಯ್ಸಿನ್ ಅವರು ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಕೇರಳ ಸರಕಾರದ ಮೊದಲ ಮುಖ್ಯಮಂತ್ರಿ ಇಎಂಎಸ್ ನಂಬೂದರಿಪಾಡ್ ಅವರು 1960ರಿಂದ ನಾಲ್ಕು ಬಾರಿ ಪಟ್ಟಾಂಬಿ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದರು.
1957ರಿಂದ ಈ ತನಕ ನಡೆದ 14 ಚುನಾವಣೆಗಳಲ್ಲಿ 2001ರ ತನಕ ಎಡರಂಗ ಈ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಹೊಂದಿತ್ತು. 9 ಬಾರಿ ಎಡರಂಗದ ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಸಿಪಿಐ ಪಕ್ಷದಿಂದ 1996ರಲ್ಲಿ ಕೆಇ ಇಸ್ಮಾಯೀಲ್(1996-2001) ಕೊನೆಯ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಅವರು ಎರಡು ಬಾರಿ ಕಾಂಗ್ರೆಸ್‌ನ ಸಿ.ಪಿ. ಮುಹಮ್ಮದ್ ವಿರುದ್ಧ ಸೋತಿದ್ದರು.
2011ರಲ್ಲಿ ಇಸ್ಮಾಯೀಲ್ ಬದಲಿಗೆ ಕೆ.ಪಿ.ಸುರೇಶ್ ರಾಜ್ ಸಿಪಿಐನಿಂದ ಕಣಕ್ಕಿಳಿದರೂ ಅವರಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. 2001ರಿಂದ ಕ್ರಾಂಗ್ರೆಸ್‌ನ ಸಿ.ಪಿ. ಮುಹಮ್ಮದ್ ಹ್ಯಾಟ್ರಿಕ್ ಜಯ ಗಳಿಸಿದ್ದಾರೆ. ಕೈ ತಪ್ಪಿರುವ ಈ ಕ್ಷೇತ್ರವನ್ನು ಮರಳಿ ಪಡೆಯಲು ಎಡರಂಗದ ಧುರೀಣರು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಾರಿ ಜೆಎನ್ ವಿವಿ ವಿದ್ಯಾರ್ಥಿ ಮುಹಮ್ಮದ್ ಮೊಯ್ಸಿನ್‌ಗೆ ಟಿಕೆಟ್ ನೀಡಲು ಎಡರಂಗದ ನಾಯಕರು ನಿರ್ಧರಿಸಿದ್ದಾರೆ.
ಮೊಯ್ಸಿನ್ ಅವರು ಖ್ಯಾತ ಧಾರ್ಮಿಕ ವಿದ್ವಾಂಸ ಸಮಸ್ತ ಕೇರಳ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ಕೆ.ಟಿ. ಮಾನು ಮುಸ್ಲಿಯಾರ್ (ಕೆಟಿ ಮುಹಮ್ಮದ್ ಮುಸ್ಲಿಯಾರ್) ಅವರ ಮೊಮ್ಮಗ. ಈ ಕಾರಣದಿಂದಾಗಿ ಮೊಯ್ಸಿನ್‌ಗೆ ಟಿಕೆಟ್ ನೀಡಿದರೆ ಲಾಭವಾಗಬಹುದು ಎನ್ನುವುದು ಎಡರಂಗದ ಲೆಕ್ಕಚಾರ.
30ರ ಹರೆಯದ ಮೊಯ್ಸಿನ್ ಜೆಎನ್ ವಿವಿಯಲ್ಲಿ ಸಿಪಿಐ ವಿದ್ಯಾರ್ಥಿ ಸಂಘಟನೆ ಎಐಎಸ್‌ಎಫ್‌ನ ಉಪಾಧ್ಯಕ್ಷರಾಗಿದ್ದಾರೆ. ಮೇ 16ರಂದು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಮೊಯ್ಸಿನ್ ಸ್ಪರ್ಧಾ ಕಣಕ್ಕೆ ಧುಮುಕಿದರೆ ಕನ್ಹೇಯ ಕುಮಾರ್ ಪ್ರಚಾರಕ್ಕೆ ಆಗಮಿಸುವ ಸಾಧ್ಯತೆ ಇದೆ.