ಕೊಹಿನೂರ್ ಬ್ರಿಟಿಷರಿಗೇ ಇರಲಿ ಎಂದ ಮೋದಿ ಸರಕಾರ !
ಹೊಸದಿಲ್ಲಿ, ಎ. 18: ಬ್ರಿಟನ್ ವಶದಲ್ಲಿರುವ ಭಾರತದ ವಿಶ್ವ ವಿಖ್ಯಾತ ಕೊಹಿನೂರ್ ವಜ್ರವನ್ನು ಭಾರತ ವಾಪಸ್ ಕೇಳಬಾರದು ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ನರೇಂದ್ರ ಮೋದಿ ಸರಕಾರ ಸೋಮವಾರ ಸುಪ್ರೀಂ ಕೋರ್ಟ್ ಅನ್ನೇ ಅಚ್ಚರಿಗೊಳಿಸಿದೆ.
ಕೊಹಿನೂರ್ ಕಳ್ಳತನವೂ ಆಗಿಲ್ಲ, ಒತ್ತಡದಿಂದಲೂ ತೆಗೆದುಕೊಂಡು ಹೋಗಿಲ್ಲ. ಹಾಗಾಗಿ ಅದನ್ನು ಮತ್ತೆ ಭಾರತ ಕೇಳಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ ಸರಕಾರ ಅದನ್ನು ಬ್ರಿಟನ್ ಇಟ್ಟುಕೊಳ್ಳಲಿ ಎಂದು ಸ್ಪಷ್ಟಪಡಿಸಿದತು.
ಇದರಿಂದ ಆಶ್ಚರ್ಯಕ್ಕೆ ಒಳಗಾದ ಸುಪ್ರೀಂ ಕೋರ್ಟ್ "ನೀವು ಭವಿಷ್ಯದಲ್ಲಿ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಮತ್ತೆ ನೀವು ಅದನ್ನು ಕಾನೂನು ಪ್ರಕಾರ ಕೇಳಲು ಸಾಧ್ಯವಿಲ್ಲ" ಎಂದು ಎಚ್ಚರಿಸಿತು. ಮುಂದಿನ 6 ವಾರಗಳಲ್ಲಿ ಸವಿವರ ಪ್ರತಿಕ್ರಿಯೆ ನೀಡಲು ಅದು ಸರಕಾರಕ್ಕೆ ಸೂಚಿಸಿತು.
ಕೊಹಿನೂರ್ ಅನ್ನು ಭಾರತ ಭಾರತಕ್ಕೆ ವಾಪಸ್ ತರಬೇಕು ಎಂದು ಆಲ್ ಇಂಡಿಯಾ ಹ್ಯೂಮನ್ ರೈಟ್ಸ್ ಎಂಡ್ ಸೋಶಿಯಲ್ ಜಸ್ಟಿಸ್ ಫ್ರಂಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರಕಾರ ಈ ಪ್ರತಿಕ್ರಿಯೆ ನೀಡಿದೆ.