ಭಾರತ ಎಲ್ಲರಿಂದಲೂ ಓಲೈಕೆ ಬಯಸುವ ಸುಂದರ ಮಹಿಳೆಯಂತೆ : ಚೀನಾದ ‘ಗ್ಲೋಬಲ್ ಟೈಮ್ಸ್’
ಬೀಜಿಂಗ್, ಎ. 18: ‘ಭಾರತ ಓರ್ವ ಅತ್ಯಾಕರ್ಷಕ ಮಹಿಳೆಯಿದ್ದಂತೆ; ಮುಖ್ಯವಾಗಿ ಅಮೆರಿಕ ಮತ್ತು ಚೀನಾ ಸೇರಿದಂತೆ ಎಲ್ಲ ಪುರುಷರು ಆಕೆಯನ್ನು ಓಲೈಸಲು ಯತ್ನಿಸುತ್ತಾರೆ’ ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಬಣ್ಣಿಸಿದೆ.
ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್‌ರ ಮುಂಬರುವ ಚೀನಾ ಭೇಟಿಯ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪತ್ರಿಕೆಯಲ್ಲಿ ಪ್ರಕಟಗೊಂಡ ‘‘ಇಂಡೋ-ಯುಎಸ್ ಸ್ಟ್ರಾಟಜಿಕ್ ಡಿಸ್ಟ್ರಸ್ಟ್ ಸ್ಟಾಲ್ಸ್ ಎಲ್‌ಎಸ್‌ಎ ಸೈನಿಂಗ್’’ ಎಂಬ ತಲೆಬರಹದ ಲೇಖನದಲ್ಲಿ ಈ ಮೇಲಿನ ಸಾಲು ಬರುತ್ತದೆ.
ಆ ಲೇಖನದ ಸಾರಾಂಶ ಇಲ್ಲಿದೆ:
‘‘ಪರಸ್ಪರ ಸಾಂಪ್ರದಾಯಿಕ ಅಪನಂಬಿಕೆಗಳ ಹೊರತಾಗಿಯೂ, ಭಾರತ ಮತ್ತು ಅಮೆರಿಕಗಳ ನಡುವಿನ ಮೈತ್ರಿಯ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ, ಈ ಊಹಾಪೋಹಗಳೂ ಸೂಪರ್-ಪವರ್‌ಗಳ ನಡುವಿನ ಮಧ್ಯವರ್ತಿಯ ಪಾತ್ರವಹಿಸಲು ಹೊರಟಿರುವ ಭಾರತದ ಮಹತ್ವಾಕಾಂಕ್ಷೆಯನ್ನು ಕಡಗಣಿಸಿದಂತೆ. ಇದು ಭಾರತಕ್ಕೆ ಅಪರಿಚಿತ ಪಾತ್ರವೇನಲ್ಲ. ಅದರ ರಾಜತಾಂತ್ರಿಕ ಚಾಕಚಕ್ಯತೆ ಶೀತಲ ಯುದ್ಧದ ಅವಧಿಯಲ್ಲಿ ಜಗತ್ತಿನ ಎರಡು ಬಣಗಳ ನಡುವೆ ತನಗೊಂದು ವಿಶೇಷ ಸ್ಥಾನವನ್ನು ಪಡೆದುಕೊಳ್ಳಲು ಹೇಗೆ ಸಹಾಯ ಮಾಡಿತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದಾಗಿದೆ’’.
‘‘ಎಲ್ಲ ಗಂಡಸರಿಂದ, ಅದರಲ್ಲೂ ಮುಖ್ಯವಾಗಿ ಬಲಿಷ್ಠ ಅಮೆರಿಕ ಮತ್ತು ಚೀನಾಗಳಿಂದ ಓಲೈಸಿಕೊಳ್ಳಲು ಬಯಸುವ ಅತ್ಯಂತ ಸುಂದರ ಮಹಿಳೆಯಾಗಿಯೇ ಮುಂದುವರಿಯಲು ಭಾರತ ಬಯಸುತ್ತಿದೆ’’.
ಕಳೆದ ವಾರ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಭಾರತಕ್ಕೆ ಮೂರು ದಿನಗಳ ಭೇಟಿ ನೀಡಿದ್ದರು. ಲಾಜಿಸ್ಟಿಕ್ಸ್ ಸಪೋರ್ಟ್ ಒಪ್ಪಂದ (ಎಲ್‌ಎಸ್‌ಎ)ಕ್ಕೆ ಸಂಗಂಧಿಸಿದ ಎಲ್ಲ ಅಂಶಗಳು ಬಗೆಹರಿದಿವೆ ಹಾಗೂ ಉಭಯ ಬಣಗಳು ಮುಂಬರುವ ವಾರಗಳಲ್ಲಿ ಒಪ್ಪಂದದ ಬರಹವನ್ನು ಅಂತಿಮಗೊಳಿಸುತ್ತವೆ ಎಂಬ ನಿರ್ಣಯಕ್ಕೆ ತಾನು ಮತ್ತು ಭಾರತೀಯ ರಕ್ಷಣಾ ಸಚಿವ ತಾತ್ವಿಕವಾಗಿ ಬಂದಿದ್ದೇವೆ ಎಂದು ಅವರು ಹೇಳಿದ್ದರು.