ಗುಂಪಿನಿಂದ ಒಂದೇ ಕುಟುಂಬದ ಮೂವರ ಸಜೀವ ದಹನ
ರಾಂಚಿ, ಎ.18: ಶಿಶು ಬಲಿಯ ಆರೋಪ ಹೊತ್ತಿದ್ದ ಒಂದೇ ಕುಟುಂಬದ ಮೂರು ಮಂದಿಯನ್ನು ಗುಂಪೊಂದು ಸಜೀವವಾಗಿ ದಹಿಸಿದ ಘಟನೆ ಜಾರ್ಖಂಡ್‌ನ ಲೊಹಾರ್ ದಾಗಾ ಜಿಲ್ಲೆಯ ಗ್ರಾಮವೊಂದರಲ್ಲಿ ನಿನ್ನೆ ಸಂಜೆ ನಡೆದಿದೆ.
ಕುಟುಂಬವು ನೆರೆ ಗ್ರಾಮದಿಂದ ಮಗುವೊಂದನ್ನು ಬಲಿಕೊಡುವುದಕ್ಕಾಗಿ ಅಪಹರಿಸಿದೆಯೆಂದು ಗುಂಪು ಶಂಕಿಸಿತ್ತು. ಆ ಕುಟುಂಬದ ಒಬ್ಬ ಸದಸ್ಯ ಈ ಮೊದಲು ಮಗುವೊಂದರ ಅಪಹರಣದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ, ಸುಮಾರು 5 ಸಾವಿರ ಮಂದಿ ಕುಟುಂಬ ವಾಸಿಸುತ್ತಿದ್ದ ಗುಡಿಸಲಿಗೆ ಮುತ್ತಿಗೆ ಹಾಕಿದರು ಹಾಗೂ ಅದಕ್ಕೆ ಬೆಂಕಿ ಹಚ್ಚಿದರು. ಕುಟುಂಬದ ಮೂವರು ಸದಸ್ಯರು ಸಾವಿಗೀಡಾಗಿದ್ದು, ಮಗುವೊಂದು ಉಳಿದುಕೊಂಡಿದೆ. ಆದರೆ, ಅದಕ್ಕೆ ಗಂಭೀರ ಗಾಯಗಳಾಗಿವೆ.
ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆದರೆ, ಮಧ್ಯರಾತ್ರಿಯ ವೇಳೆಗಷ್ಟೇ ಗುಂಪನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು.
ಲೊಹಾರ್‌ದಾಗಾ ರಾಜ್ಯದ ರಾಜಧಾನಿ ರಾಂಚಿಯಿಂದ ಸುಮಾರು 70 ಕಿ.ಮೀ. ದೂರದಲ್ಲಿದೆ.