×
Ad

ಸೂರತ್‌ನಲ್ಲಿ ಯುವಕನ ಆತ್ಮಹತ್ಯೆ

Update: 2016-04-18 22:16 IST

ಪಟೇಲ್ ಮೀಸಲಾತಿ ಹಿಂಸಾಚಾರ ಸೂರತ್, ಎ.18: ಪಾಟಿದಾರ್ ಮೀಸಲಾತಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇಲ್ಲಿನ 27ರ ಹರಯೆದ ಪಟೇಲ್ ಯುವಕನೊಬ್ಬ ಮೆಹ್ಸಾನಾದಲ್ಲಿ ಪಟೇಲ್ ಮೀಸಲಾತಿ ನಾಯಕರ ವಿರುದ್ಧ ಪೊಲೀಸರ ಕ್ರಮದ ಕುರಿತು ತಿಳಿದು ‘ಆಘಾತಗೊಂಡು’ ವಿಷಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ (ಪಿಎಎಎಸ್) ನಾಯಕರು ಪ್ರತಿಪಾದಿಸಿದ್ದಾರೆ.

ಆದಾಗ್ಯೂ, ಯುವಕ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡನೆಂಬುದು ತನಿಖೆ ನಡೆಸಬೇಕಾದ ಸಂಗತಿಯಾಗಿದೆಯೆಂದು ಪೊಲೀಸರು ಹೇಳಿದ್ದಾರೆ.
ನಗರದ ಪಿಎಎಎಸ್ ಘಟಕದೊಂದಿಗೆ ಸಂಬಂಧ ಹೊಂದಿದ್ದ ಭವಿನ್ ಖುಂಟ್‌ನ(27) ಎಂಬಾತ ನಿನ್ನೆ ಸಂಜೆ ಪೂನಾ ಗಾಮ್ ಪ್ರದೇಶದ ತನ್ನ ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನೆಂದು ಸೂರತ್‌ನ ಪಿಎಎಎಸ್ ಸಂಚಾಲಕ ನಿಖಿಲ್ ಸಾವನಿ ಎಂಬವರು ತಿಳಿಸಿದ್ದಾರೆ.
ಮೆಹ್ಸಾನಾದಲ್ಲಿ ‘ಜೈಲ್ ಭರೊ’ ಚಳವಳಿಯ ವೇಳೆ ಸೇರಿದ್ದ ಪಟೇಲ್ ಸಮುದಾಯದವರು ಹಾಗೂ ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ಸುದ್ದಿ ತಿಳಿದ ಬಳಿಕ ಖುಂಟ್ ತೀವ್ರ ಆಘಾತಗೊಂಡಿದ್ದನೆಂದು ಅವರು ಹೇಳಿದ್ದಾರೆ.


ನಿನ್ನೆ ಸಂಜೆ 7ರ ಸುಮಾರಿಗೆ ವಿಷದ ಮಾತ್ರೆಗಳನ್ನು ಸೇವಿಸಿದ ಖುಂಟ್‌ನನ್ನು ವರಚ್ಚಾದ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು. ಅಲ್ಲಿ ಆತ ಮಧ್ಯ ರಾತ್ರಿಯ ವೇಳೆ ಕೊನೆಯುಸಿರೆಳೆದನು. ಖುಂಟ್ ಅಮ್ರೇಲಿ ಜಿಲ್ಲೆಯ ಬಾಬ್ರಾ ತಾಲೂಕಿನವನಾಗಿದ್ದು, ಅನೇಕ ವರ್ಷಗಳಿಂದ ಸೂರತ್‌ನಲ್ಲಿ ನೆಲೆಸಿದ್ದನು. ಆತ ಜವಳಿ ವ್ಯಾಪಾರ ನಡೆಸುತ್ತಿದ್ದನೆಂದು ಸಾವನಿ ವಿವರಿಸಿದ್ದಾರೆ.
ಪೂನಾಗಾಮ್ ಪೊಲೀಸರು ಈ ಸಂಬಂಧ ದೂರು ದಾಖಲಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News