ಮಹದಾಯಿ ಹೆಸರಲ್ಲಿ ಗದ್ದುಗೆ ಏರಿದವರು ಬೇಗ ಎಚ್ಚತ್ತುಕೊಳ್ಳಬೇಕು...

Update: 2016-04-18 18:22 GMT

ಮಹದಾಯಿ ಹೋರಾಟ ಕಳೆದ 9 ತಿಂಗಳುಗಳಿಂದ ಎಲ್ಲ ಅಡೆತಡೆಗಳನ್ನು ದೂರ ಸರಿಸಿ ಯಶಸ್ವಿಯಾಗಿ ನಡೆಯುತ್ತಿದೆ. ಜನ ಸಾಮಾನ್ಯರು ರೈತರ ಮೇಲೆ ನಂಬಿಕೆ ಇಟ್ಟಿದ್ದಾರೆ. ರೈತ ಹೋರಾಟಗಾರರು ಸರಕಾರಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದ ಇಬ್ಬರು ನಂಬಿಕೆ ದ್ರೋಹ ಮಾಡದೆ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಮಹದಾಯಿ ಹೋರಾಟ ಸಮನ್ವಯ ಸಮಿತಿ ಆಗ್ರಹಿಸುತ್ತದೆ.

ಹೋರಾಟ ನಿಲ್ಲಿಸಲು ರಾಜಕೀಯವಾಗಿ ಸಾಕಷ್ಟು ಸಾಹಸ ನಡೆಯುತ್ತಿದೆ. ಮಹದಾಯಿಗಾಗಿ, ಕಳಸಾ ಬಂಡೂರಿಗಾಗಿ ಬಂಡಾಯದ ನೆಲದಲ್ಲಿ ಸಾಕಷ್ಟು ಹೋರಾಟ, ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆದಿವೆ, ನಡೆಯುತ್ತಿವೆ. ಆದರೆ ಇದರ ಬಗ್ಗೆ ಯಾರಿಂದಲೂ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ವಿಶೇಷವಾಗಿ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ಯೋಜನೆಯ ಅನುಷ್ಠಾನ ತಮ್ಮ ಕೆಲಸ ಎಂದು ಪರಿಭಾವಿಸದೆ ತಮ್ಮದೇ ಐಷಾರಾಮಿ ಲೋಕದಲ್ಲಿಯೇ ಮೆರೆಯುತ್ತಿದ್ದಾರೆ.ಆದರೆ ಇನ್ನು ಮುಂದೆ ಇದಕ್ಕೆ ಅವಕಾಶವಿಲ್ಲ. ರೈತರು ಈಗಾಗಲೇ ತೀವ್ರವಾಗಿ ಕೋಪಗೊಂಡಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಜಿಲ್ಲಾ, ತಾಲ್ಲೂಕು ಪಂಚಾ ಯತ್ ಚುನಾವಣೆಯಲ್ಲಿ ಚಲಾ ವಣೆಯಾದ ನೋಟಾದಿಂದ ತೋರಿಸಿಕೊಟ್ಟಿದ್ದಾರೆ.

 ಮಹದಾಯಿ ಯೋಜನೆ ಈಡೇರುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂಬ ಪ್ರಮಾಣ ದೊಂದಿಗೆ ಧರಣಿ ವೇದಿಕೆ ಏರಿದ್ದಾರೆ ರೈತರು. ಆದ್ದರಿಂದ ಯೋಜನೆ ಅನುಷ್ಠಾನಗೊಳ್ಳುವವರೆಗೂ ಹೋರಾಟ ಕೈಬಿಡುವ ಮಾತೇ ಇಲ್ಲ ಎಂಬುದು ಈ ಭಾಗದ ರೈತರು ಸ್ಪಷ್ಟಪಡಿಸಿದ್ದಾರೆ. ನಾವು ಪ್ರಾಮಾಣಿಕವಾಗಿ 273 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ನಾಯಿಕೊಡೆಗಳಂತೆ ರೈತ ಸಂಘಟನೆಗಳು ಹುಟ್ಟಿಕೊಂಡು ಕೆಲವರು ಹೋರಾಟದ ದಾರಿ ತಪ್ಪಿಸುವಲ್ಲಿ ಮುಂದಾಗುತ್ತಿ ದ್ದಾರೆ. ಇದರಿಂದ ರೈತರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಇದು ಸಲ್ಲದು. ಇದೇ ಅವಕಾಶವನ್ನು ನಮ್ಮ ರಾಜಕಾರಣಿಗಳು ಕಾಯುತ್ತಿದ್ದಾರೆ. ಅವರಿಗೆ ರೈತರನ್ನು ಒಡೆದು ಆಳುವುದು ಬೇಕಿದೆ. ಆದ್ದರಿಂದ ಇದರ ಬಗ್ಗೆ ರೈತರು ಜಾಗೃತಿಗೊಳ್ಳಬೇಕಿದೆ. ರೈತರ ಅಸ್ತಿತ್ವಕ್ಕಾಗಿ ಯೋಜನೆ ಈಡೇರುವವರೆಗೂ ಹೋರಾಟ ನಿಲ್ಲದಂತೆ ನೋಡಿಕೊಳ್ಳಬೇಕಿದೆ.

  ಸಂಸದರು ಮನಸ್ಸು ಮಾಡಿದರೆ ಈ ಭಾಗದಲ್ಲಿ ಈಗಾಗಲೇ ಮಹದಾಯಿ ನೀರು ಹರಿಯುತ್ತಿತ್ತು. ಆದರೆ ನಮ್ಮ ಸಂಸದರು, ಶಾಸಕರು, ಸಚಿವರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದರಿಂದಲೇ ಇವರ ಕಾಳಜಿ ಗೊತ್ತಾಗುತ್ತದೆ. ಇದು ಸಲ್ಲದು. ರಾಜ ಕಾರಣಿಗಳಿಗೆ ರೈತರ ಬಗ್ಗೆ ಕಳಕಳಿ ಇದ್ದರೆ ತಮ್ಮ ಶಕ್ತಿ ಪ್ರದರ್ಶಿಸಿ ಪ್ರಧಾನಿಗಳ ಮನವೊಲಿಸುವಂತೆ ಮಾಡಲಿ. ಕೇಂದ್ರ, ರಾಜ್ಯ ಸರಕಾರಗಳು ರೈತರ ಸಂಕಷ್ಟ ಅರಿತು ಯೋಜನೆ ಜಾರಿ ಮಾಡಬೇಕು. ಈಗಾಗಲೇ ವಿದ್ಯಾರ್ಥಿ, ಜನಸಾಮಾನ್ಯರ ಸಂಘಟ ನೆಗಳು ಬೆಂಬಲ ನೀಡಿವೆ. ರಾಜಕಾರಣಿಗಳಿಂದ ಇದೇ ತೆರೆನಾದ ವಿಳಂಬ ನೀತಿ ಮುಂದುವರಿದರೆ ಜನಸಾಮಾನ್ಯರೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.

ವಿದ್ಯಾರ್ಥಿ ಶಕ್ತಿ, ಯುವ ಶಕ್ತಿ ಹಾಗೂ ಶ್ರೀಸಾಮಾನ್ಯನ ಶಕ್ತಿ ಒಂದಾದರೆ ರಾಜಕಾರಣಿಗಳಿಗೆ ಏನಾಗ ಬಹುದೆಂಬುದು ತಿಳಿದ ವಿಷಯ. ಅದು ಒಂದಾಗುವ ಕಾಲ ಬಂದೊದಗಿದೆ. ಜನರು ತೀವ್ರ ಕೆರಳುವ ಮುನ್ನ ಮಹದಾಯಿ ಹೋರಾಟದ ಹೆಸರಲ್ಲಿ ಅಧಿಕಾರ ಪಡೆದು ಐಷಾರಾಮಿ ಜೀವನ ನಡೆಸುತ್ತಿರುವವರು ಎಚ್ಚತ್ತು ರೈತರ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ.

Writer - ಕೆ.ಶಿವು.ಲಕ್ಕಣ್ಣವರ

contributor

Editor - ಕೆ.ಶಿವು.ಲಕ್ಕಣ್ಣವರ

contributor

Similar News