ಭವಿಷ್ಯ ನಿಧಿ ನೀತಿಯಲ್ಲಿ ಬದಲಾವಣೆ; ಮನೆ ಕಟ್ಟಲು, ಮದುವೆ, ವೃತ್ತಿ ಶಿಕ್ಷಣಕ್ಕೆ ಹಣ ಹಿಂಪಡೆಯಲು ಅವಕಾಶ
ಹೊಸದಿಲ್ಲಿ, ಎ.19: ಕಳೆದ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯ ಬಳಿಕ ಭವಿಷ್ಯ ನಿಧಿ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿ ವಿವಾದ ಹುಟ್ಟಿಕೊಂಡಿದ್ದು, ಸರಕಾರದ ನೂತನ ಪಿಎಫ್ ನೀತಿಯನ್ನು ವಿರೋಧಿಸಿ ಅಲ್ಲಲ್ಲಿ ಪ್ರತಿಭಟನೆ ಕಂಡು ಬಂದಿರುವ ಬೆನ್ನಲ್ಲೆ ಕೇಂದ್ರ ಸರಕಾರ ನೂತನ ನೂತನ ಭವಿಷ್ಯ ನಿಧಿ (ಪಿಎಫ್) ನೀತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಮುಂದಾಗಿದೆ.
ಭವಿಷ್ಯ ನಿಧಿ ಚಂದಾದಾರರು ಸ್ವಂತ ಅಥವಾ ಕುಟುಂಬ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ, ಮಕ್ಕಳಿಗೆ ವೈದ್ಯಕೀಯ, ದಂತವಿಜ್ಞಾನ ಮತ್ತು ಎಂಜಿನಿಯರಿಂಗ್ ಶಿಕ್ಷಣ , ಮಕ್ಕಳ ಮದುವೆಗೆ ಹಣ ಹಿಂಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.
ಹೊಸ ನೀತಿಯ ಸಡಿಲಿಕೆಯ ಸವಲತ್ತು ಯಾವುದಾದರೂ ಸಂಸ್ಥೆ, ಕೇಂದ್ರ ಅಥವಾ ರಾಜ್ಯ ಸರಕಾರಿ ಸೇವೆಗೆ ಸೇರಿದ ಭವಿಷ್ಯ ನಿಧಿ ಸದಸ್ಯರಿಗೆ, ವಂತಿಗೆ ನೀಡಿಕೆ ಭವಿಷ್ಯ ನಿಧಿ ಯೋಜನೆಗೆ ಸೇರ್ಪಡೆಯಾದವರಿಗೆ ಮತ್ತು ಪಿಂಚಣಿ ಯೋಜನೆಗೆ ಸೇರ್ಪಡೆಯಾದವರಿಗೂ ವಿಸ್ತರಿಸಲಾಗಿದೆ. ಮುಂಬರುವ ಆಗಸ್ಟ್ 1ರಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ.
ಕಾರ್ಮಿಕ ಸಂಘಗಳು ದೇಶಾದ್ಯಂತ ಕೇಂದ್ರದ ನೂತನ ಪಿಎಫ್ ನೀತಿಗೆ ತೀವ್ರ ವಿರೋಧ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ., ನೂತನ ಕಾರ್ಮಿಕ ನೀತಿ ವಿರುದ್ಧ ಗಾರ್ಮೆಂಟ್ಸ್ ಕಾರ್ಮಿಕರು ಬೆಂಗಳೂರಿನ ಹಲವೆಡೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಮಿಕರ ಪ್ರತಿಭಟನೆ ಎರಡನೆ ದಿನವೂ ಮುಂದುವರಿದಿದ್ದು, ಅಲ್ಲಲ್ಲಿ ಪ್ರತಿಭಟನೆಕಾರರಿಂದ ಪೊಲೀಸರಿಗೆ , ಬಿಎಂಟಿಸಿ ಬಸ್‌ಗಳಿಗೆ ಕಲ್ಲು ತೂರಾಟ , ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ. ಹಿಂಸಾಚಾರಕ್ಕೆ ಇಳಿದ ಪ್ರತಿಭಟನೆಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.