‘ಶ್ರೀ ರಾಮ್ ಕಿ ಜೈ’ ಜಪಿಸಲು ನಿರಾಕರಿಸಿದ ಪಾದ್ರಿ ಕುಟುಂಬದ ಮೇಲೆ ದಾಳಿ
ಬಸ್ತರ್ : ಪಿಸ್ತೂಲು, ಕತ್ತಿ, ಸರಳು ಮುಂತಾದ ಆಯುಧಗಳನ್ನು ತಮ್ಮ ಕೈಗಳಲ್ಲಿ ಝಳಪಿಸುತ್ತಾ ಬಸ್ತರ್ ಜಿಲ್ಲೆಯ ತೊಕಾಪಲ್ ತೆಹ್ಸಿಲ್ ಪ್ರದೇಶದ ಕಾರಂಜಿ ಮಟಗುಡಿ ಪರ ಗ್ರಾಮದ ಚರ್ಚೊಂದಕ್ಕೆ ದಾಳಿ ನಡೆಸಿದಹಿಂದೂ ಸಂಘಟನೆಗಳಿಗೆ ಸೇರಿದವರೆನ್ನಲಾದ ಕೆಲ ಮಂದಿ ಚರ್ಚನಲ್ಲಿ ದಾಂಧಲೆಗೈದರಲ್ಲದೆ ‘ಶ್ರೀ ರಾಮ್ ಕಿ ಜೈ’ ಎಂದು ಜಪಿಸಲು ನಿರಾಕರಿಸಿದಪಾದ್ರಿ ಹಾಗೂ ಆತನ ಕುಟುಂಬ ಸದಸ್ಯರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ.ಇದು ರಾಜ್ಯದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಚರ್ಚ್ ದಾಳಿಯಾಗಿದೆ.
ಪಾದ್ರಿ ದೀನ್ ಬಂಧು ಸಮೇಲಿ, ಆತನ ಏಳು ತಿಂಗಳ ಗರ್ಭಿಣಿ ಪತ್ರಿ ಹಾಗೂ ಪುತ್ರಿ ರೌಶ್ನಿ ವಿದ್ಯಾಳ ಮೇಲೆ ದಾಳಿಕೋರರು ಹಲ್ಲೆ ಕೂಡ ನಡೆಸಿದ್ದಾರೆ. ದಾಳಿಕೋರರಿಂದ ಕಷ್ಟಪಟ್ಟು ಪಾದ್ರಿಯ ಕುಟುಂಬ ತಪ್ಪಿಸಿಕೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನಂತರ ಸ್ಥಳಕ್ಕೆ ಧಾವಿಸಿಅಪರಿಚಿತ ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ಇನ್ನೂ ಪತ್ತೆ ಹಚ್ಚದಿರುವುದಕ್ಕೆ ಛತ್ತೀಸಗಢ ಕ್ರಿಶ್ಚಿಯನ್ ಫೋರಂ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದು ಆರೋಪಿಗಳು ಹತ್ತಿರದ ಪ್ರದೇಶದವರೇ ಆಗಿರುವ ಸಾಧ್ಯತೆಯಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟಕರವಲ್ಲವೆಂದಿದ್ದಾರೆ. ಆರೋಪಿಗಳನ್ನು ‘ವಿಶ್ವ ಹಿಂದೂ ಪರಿಷದ್’ರಕ್ಷಿಸುತ್ತಿದೆಯೆಂದುತಾನು ನಂಬಿರುವುದಾಗಿಅವರು ಆರೋಪಿಸಿದ್ದಾರಲ್ಲದೆ ಘಟನೆಯ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.
ಇಬ್ಬರು ಅಪರಿಚಿತ ದಾಳಿಕೋರರ ವಿರುದ್ಧ ದೂರು ದಾಖಲಾಗಿದ್ದು ತನಿಖೆಗೆ ಆದೇಶಿಸಲಾಗಿದೆಯೆಂದು ಬಸ್ತರ್ ಜಿಲ್ಲೆಯ ಹೆಚ್ಚುವರಿ ಎಸ್ಪಿ ತಿಳಿಸಿದ್ದಾರೆ.