ಡೊನಾಲ್ಡ್ ಟ್ರಂಪ್ ಗೆ ಮುಳುವಾದ ಐ ಎಸ್ ಐ ಕನೆಕ್ಷನ್ !
ವಾಶಿಂಗ್ಟನ್, ಎ. 19: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮುಂಚೂಣಿಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರ ಪ್ರಮುಖ ಪ್ರಚಾರ ಸಹಾಯಕ ಪೌಲ್ ಮ್ಯಾನಫೋರ್ಟ್ ಕಾಶ್ಮೀರಿ ಅಮೆರಿಕನ್ ಕೌನ್ಸಿಲ್‌ನ ನೋಂದಾಯಿತ ವಶೀಲಿಗಾರ (ಲಾಬಿಯಿಸ್ಟ್)ನಾಗಿದ್ದರು ಎನ್ನಲಾಗಿದೆ.
ಈ ಸಂಘಟನೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯ ಛದ್ಮಸಂಸ್ಥೆ (ಫ್ರಂಟ್)ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಾಗಿ ಅಮೆರಿಕದ ಕಾನೂನು ಇಲಾಖೆಯ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.
ಫಿಲಿಪ್ಪೀನ್ಸ್‌ನ ಮಾಜಿ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೊಸ್, ಝೈರೆಯ ಅಮಾನುಷ ಸರ್ವಾಧಿಕಾರಿ ಮೊಬುಟು ಸೆಸೆ ಸೆಕೊ ಮುಂತಾದ ವಿವಾದಾಸ್ಪದ ವಿದೇಶೀಯರು ಮ್ಯಾನಫೋರ್ಟ್‌ರ ಕಕ್ಷಿದಾರರಾಗಿದ್ದರು. ಆದರೆ, ಭಯೋತ್ಪಾದಕರೊಂದಿಗೆ ಐಎಸ್‌ಐಗೆ ಇರುವ ನಿಕಟ ಸಂಪರ್ಕದ ಹಿನ್ನೆಲೆಯಲ್ಲಿ, ಆ ಸಂಸ್ಥೆಯೊಂದಿಗೆ ಮ್ಯಾನಫೋರ್ಟ್ ಹೊಂದಿರುವ ನಂಟನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.
2009ರಲ್ಲಿ ಅಫ್ಘಾನಿಸ್ತಾನದ ಕ್ಯಾಂಪ್ ಚಾಪ್‌ಮನ್‌ನಲ್ಲಿ ಏಳು ಸಿಐಎ ಏಜಂಟ್‌ಗಳನ್ನು ಬಲಿ ತೆಗೆದುಕೊಂಡ ಆತ್ಮಹತ್ಯಾ ಬಾಂಬ್ ದಾಳಿಗೆ ಐಎಸ್‌ಐ ಹಣ ಒದಗಿಸಿರುವ ಸಾಧ್ಯತೆಯಿದೆ ಎಂಬ ಗೌಪ್ಯ ಸಂಗತಿಯೊಂದು ಇತ್ತೀಚೆಗೆ ಬಹಿರಂಗವಾಗಿದ್ದನ್ನು ಸ್ಮರಿಸಬಹುದಾಗಿದೆ.
‘‘ಸುದೀರ್ಘ ಭಯೋತ್ಪಾದಕ ನಿಗ್ರಹ ತನಿಖೆಯ ವೇಳೆ, ಕಾಶ್ಮೀರಿಗಳ ಪರವಾಗಿ ಲಾಬಿ ಮಾಡುವುದಕ್ಕಾಗಿ ಮ್ಯಾನಫೋರ್ಟ್ ಪಡೆದುಕೊಂಡ ಗುತ್ತಿಗೆಯು ಎಫ್‌ಬಿಐನ ಗಮನಕ್ಕೆ ಬಂದಿತ್ತು ಎಂಬುದನ್ನು ನ್ಯಾಯಾಲಯದ ದಾಖಲೆಗಳು ಹೇಳುತ್ತವೆ. ಕಾಶ್ಮೀರಿ ಕೌನ್ಸಿಲ್‌ನ ನಿರ್ದೇಶಕ ಸಯ್ಯದ್ ಗುಲಾಮ್ ನಬಿ ಫಾಯ್‌ನ ಬಂಧನದೊಂದಿಗೆ 2011ರಲ್ಲಿ ವಿಚಾರಣೆ ಕೊನೆಗೊಂಡಿತ್ತು. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಯ ಪರವಾಗಿ ಆತ ತನ್ನ ಗುಂಪನ್ನು ನಡೆಸುತ್ತಿದ್ದ ಎಂಬ ಆರೋಪವನ್ನು ಆತನ ವಿರುದ್ಧ ಹೊರಿಸಲಾಗಿತ್ತು. ವಿವಾದಾಸ್ಪದ ಕಾಶ್ಮೀರ ಭೂಭಾಗದ ಬಗ್ಗೆ ಅಮೆರಿಕದ ನೀತಿಯ ಮೇಲೆ ರಹಸ್ಯ ಪ್ರಭಾವ ಬೀರುವುದು ಕಾಶ್ಮೀರಿ ಅಮೆರಿಕನ್ ಕೌನ್ಸಿಲ್‌ನ ಉದ್ದೇಶವಾಗಿತ್ತು’’ ಎಂದು ಯಾಹೂ ನ್ಯೂಸ್ ಸೋಮವಾರ ವರದಿ ಮಾಡಿದೆ.
ಮ್ಯಾನಫೋರ್ಟ್‌ರ ವಶೀಲಿಬಾಜಿ (ಲಾಬಿ ಮಾಡುವ) ಸಂಸ್ಥೆ ‘ಬ್ಲಾಕ್, ಮ್ಯಾನಫೋರ್ಟ್, ಸ್ಟೋನ್ ಆ್ಯಂಡ್ ಕೆಲಿ’ಗೆ ಕಾಶ್ಮೀರಿ ಅಮೆರಿಕನ್ ಕೌನ್ಸಿಲ್ 1990 ಮತ್ತು 1995ರ ನಡುವಿನ ಅವಧಿಯಲ್ಲಿ 7 ಲಕ್ಷ ಡಾಲರ್ (ಸುಮಾರು 4.7 ಕೋಟಿ ರೂಪಾಯಿ) ನೀಡಿತ್ತು. ಇದೂ ಸೇರಿದಂತೆ ಐಎಸ್‌ಐಯಿಂದ 40 ಲಕ್ಷ ಡಾಲರ್ (ಸುಮಾರು 27 ಕೋಟಿ ರೂಪಾಯಿ)ಗೂ ಅಧಿಕ ಹಣ ಅವರ ವಶೀಲಿ ಸಂಸ್ಥೆಗೆ ಸಂದಾಯವಾಗಿದೆ. ಈ ಪೈಕಿ ಹೆಚ್ಚಿನ ಹಣ ಫಾಯ್ ಮೂಲಕ ಬಂದಿದೆ.
ಅಮೆರಿಕದ ಲಾಭೋದ್ದೇಶರಹಿತ ಸಂಸ್ಥೆಗೆ, ಕಾಶ್ಮೀರದ ಜನರ ಬವಣೆಯ ಬಗ್ಗೆ ಸಹಾನುಭೂತಿ ಹೊಂದಿರುವ ಅಮೆರಿಕನ್ನರು ಹಣಕಾಸು ನೆರವು ನೀಡುತ್ತಾರೆ ಎಂಬುದಾಗಿ ತೋರ್ಪಡಿಸಲಾಗುತ್ತಿತ್ತು. ಆದರೆ, ವಾಸ್ತವವಾಗಿ ಅದಕ್ಕೆ ಹಣಕಾಸು ಪೂರೈಕೆ ಮಾಡುತ್ತಿದ್ದುದು ಐಎಸ್‌ಐ ಆಗಿತ್ತು.
ತನ್ನ ವಿರುದ್ಧದ ಪಿತೂರಿ ಮತ್ತು ತೆರಿಗೆ ವಂಚನೆ ಆರೋಪಗಳನ್ನು ಫಾಯ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಆತನಿಗೆ ಎರಡು ವರ್ಷಗಳ ಶಿಕ್ಷೆಯೂ ಆಗಿದ್ದು, ಇತ್ತೀಚೆಗೆ ಬಿಡುಗಡೆಯಾಗಿದ್ದಾನೆ.