ಇಡೀ ಕಂಪೆನಿ ಡಿಲೀಟ್ ಮಾಡಿದ್ದು ಸುಳ್ಳು- ಕೇವಲ ಪ್ರಚಾರ ತಂತ್ರ !
ಲಂಡನ್ : ವಿಚಿತ್ರ ಘಟನೆಯೊಂದರಲ್ಲಿ ವೆಬ್ ಹೋಸ್ಟಿಂಗ್ ಕಂಪೆನಿಯೊಂದನ್ನು ನಡೆಸುತ್ತಿರುವ ಮಾರ್ಕೋ ಮರ್ಸಲ ಎಂಬ ವ್ಯಕ್ತಿಯೊಬ್ಬ ತಾನು ತನ್ನ ಇಡೀ ಕಂಪೆನಿ ಹಾಗೂ ಅದರ ಗ್ರಾಹಕರ ವೆಬ್ ಸೈಟುಗಳೆಲ್ಲವನ್ನೂ ತಪ್ಪಾದ ಕೋಡ್ ಒಂದನ್ನು ಟೈಪ್ ಮಾಡಿ ಡಿಲೀಟ್ ಮಾಡಿದ್ದೇನೆಂದು ಇತ್ತೀಚೆಗೆ ಹೇಳಿಕೊಂಡಿದ್ದ. ಮಾರ್ಕೋನ ಕಂಪೆನಿಗೆ 1,535ಕ್ಕೂ ಹೆಚ್ಚು ಗ್ರಾಹಕರಿದ್ದು ಈ ಗ್ರಾಹಕರ ವೆಬ್ ಸೈಟುಗಳ ಫೈಲುಗಳನ್ನು ಶೇಖರಿಸಲ್ಪಟ್ಟ ಸರ್ವರುಗಳು ಹಾಗೂ ಇಂಟರ್‌ನೆಟ್ ಸಂಪರ್ಕಗಳ ಮೇಲ್ವಿಚಾರಣೆಯನ್ನು ಆತನ ಕಂಪೆನಿ ನೋಡಿಕೊಳ್ಳುತ್ತಿತ್ತು. ಇತ್ತೀಚೆಗೆ ಆತ ‘ಸರ್ವರ್ ಫಾಲ್ಟ್’ ಎಂಬ ಸರ್ವರ್ ತಜ್ಞರ ಫೋರಂ ಒಂದರಲ್ಲಿ ತಾನು ಒಂದು ತಪ್ಪಾದ ಕೋಡನ್ನು ತನ್ನ ಕಂಪ್ಯೂಟರುಗಳಲ್ಲಿ ಆಕಸ್ಮಿಕವಾಗಿ ಹಾಕಿ ಸಿಕ್ಕಿಕೊಂಡಿದ್ದೇನೆಂದು ತನ್ನ ಗ್ರಾಹಕರ ವೆಬ್‌ಸೈಟುಗಳ ದಾಖಲೆಗಳೆಲ್ಲವೂ ಡಿಲೀಟ್ ಆಗಿದೆಯೆಂದು ಹೇಳಿಕೊಂಡಿದ್ದ.
ಆದರೆ ಇದೀಗ ಆತ ಹೇಳಿದ್ದೆಲ್ಲವೂ ಸುಳ್ಳು ಎಂದು ತಿಳಿದು ಬಂದಿದೆ. ರಿಪಬ್ಬ್ಲಿಕಾ ಐಟಿಗೆ ನೀಡಿದ ಹೇಳಿಕೆಯೊಂದರಲ್ಲಿ ಆತ ತಾನು ಈ ಹಿಂದೆ ಹೇಳಿದ್ದೆಲ್ಲವೂ ಕೇವಲ ಪ್ರಚಾರ ತಂತ್ರವೆಂದೂ ಯಾವುದೇ ದಾಖಲೆಗಳೂ ಕಳೆದು ಹೋಗಿಲ್ಲವೆಂದು ಸೃಷ್ಟೀಕರಣ ನೀಡಿದ್ದಾನೆ. ಈ ಬೆಳವಣಿಗೆ ಹಲವರಿಗೆ ತಮಾಷೆಯೆನಿಸಿದರೆ ಮತ್ತೆ ಕೆಲವರು ಆತನನ್ನು ಟೀಕಿಸಿದ್ದಾರೆ.
ತನ್ನ ಸ್ಟಾರ್ಟ್-ಅಪ್ ಸಂಸ್ಥೆಯನ್ನು ಜನಪ್ರಿಯಗೊಳಿಸಲು ತಾನು ಗೆರಿಲ್ಲಾ ಮಾರ್ಕೆಟಿಂಗ್ ತಂತ್ರಗಳನ್ನು ಬಳಸುತ್ತಿರುವುದಾಗಿ ಆತ ಹೇಳಿಕೊಂಡಿದ್ದಾನಲ್ಲದೆ ತಾನು ಈ ಹಿಂದೆ ಹೇಳಿದ್ದೆಲ್ಲಾ ಸುಳ್ಳು ಎನ್ನುವುದಕ್ಕೆ ತನ್ನ ಪೋಸ್ಟಿನಲ್ಲಿ ಕೆಲವು ಸುಳಿವುಗಳನ್ನು ಬಿಟ್ಟಿದ್ದಾಗಿಯೂ ಆತ ತಿಳಿಸಿದ್ದಾನೆ.