ಮಕ್ಕಳಿಗೆ ಮುಂಜಿ ಮಾಡಿಸುವ ವಿಷಯ ಕೋರ್ಟ್ ಗೆ
ಲಂಡನ್ , ಎ. 19 : ಅಲ್ಜೀರಿಯನ್ ಮೂಲದ ಬ್ರಿಟಿಷ್ ತಂದೆಯೊಬ್ಬ ತನ್ನ ಇಬ್ಬರು ಗಂಡು ಮಕ್ಕಳಿಗೆ ಇಸ್ಲಾಮಿಕ್ ವಿಧಿ ವಿಧಾನಗಳ ಪ್ರಕಾರ ಮುಂಜಿ ಮಾಡಿಸಬೇಕೆ ಎಂಬ ಕುರಿತು ತನ್ನ ಬ್ರಿಟಿಷ್ ಪತ್ನಿಯ ವಿರುದ್ಧ ನಡೆದ ಕೋರ್ಟ್ ಕೇಸ್ ನಲ್ಲಿ ಸೋಲನುಭವಿಸಿದ್ದಾರೆ. ಇಬ್ಬರು ಮಕ್ಕಳಿಗೆ ಕ್ರಮವಾಗಿ 6 ಹಾಗು 4 ವರ್ಷ ವಯಸ್ಸು.
ಕಳೆದ ೧೫ ವರ್ಷಗಳಿಂದ ಇಂಗ್ಲಂಡ್ ನಲ್ಲಿರುವ ತಂದೆ " ಮುಸ್ಲಿಂ ನಂಬಿಕೆಗಳ ಪ್ರಕಾರ ಮುಂಜಿ ಮಾಡಿಸುವುದು ಮಕ್ಕಳ ಹಿತಾಸಕ್ತಿಯಿಂದ ಒಳ್ಳೆಯದು " ಎಂದು ವಾದಿಸಿದ್ದರು. ಆದರೆ ಮಕ್ಕಳ ತಾಯಿ " ಮಕ್ಕಳು ಇದಕ್ಕೆ ಅನುಮತಿ ನೀಡುವಷ್ಟು ದೊಡ್ಡವರಾದ ಮೇಲೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು " ಎಂದು ಹಠ ಹಿಡಿದಿದ್ದರು.
ವಿಚಾರಣೆ ನಡೆಸಿದ ಇಂಗ್ಲಂಡ್ ಹೈ ಕೋರ್ಟ್ " ಮುಂಜಿ ಮಾಡಿದ ಮೇಲೆ ಅದನ್ನು ಮತ್ತೆ ಮೊದಲಿನಂತೆ ಮಾಡಲು ಸಾಧ್ಯವಿಲ್ಲ. ಈ ಮಕ್ಕಳು ತಮ್ಮ ತಂದೆ ಹೇಳಿದಂತೆ ಮುಸ್ಲಿಮರಾಗಿ ಬದುಕುತ್ತಾರೆ ಎಂದು ಯಾವುದೇ ಖಚಿತತೆ ಇಲ್ಲ " ಎಂದು ಹೇಳುವ ಮೂಲಕ ಮುಂಜಿ ಮಾಡಿಸುವ ವಿರುದ್ಧ ತೀರ್ಪು ನೀಡಿತು.
2009 ರಲ್ಲಿ ಮುಸ್ಲಿಂ ವಿಧಿವಿಧಾನಗಳ ಪ್ರಕಾರ ಮದುವೆಯಾದ ಈ ದಂಪತಿ 2012 ರಲ್ಲಿ ಬೇರ್ಪಟ್ಟಿದ್ದರು . ತನ್ನ ಪತಿ ತನಗೆ ಹಿಂಸೆ ನೀಡುತ್ತಾರೆ ಎಂದು ಆರೋಪಿಸಿ ಪತ್ನಿ ತನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದರು.