ಆಕರ್ಷಕ ವಿದೇಶಿ ಪುರುಷರ ಬಗ್ಗೆ ಎಚ್ಚರ! ಸರಕಾರೀ ಮಹಿಳಾ ಉದ್ಯೋಗಿಗಳಿಗೆ ಚೀನಾ ಎಚ್ಚರಿಕೆ
ಬೀಜಿಂಗ್, ಎ. 19: ಸುಂದರ ವಿದೇಶೀಯರೊಂದಿಗೆ ಸಂಬಂಧ ಬೆಳೆಸುವಾಗ ಎಚ್ಚರಿಕೆಯಿಂದಿರುವಂತೆ ಚೀನಾ ತನ್ನ ಯುವ ಮಹಿಳಾ ಸರಕಾರಿ ಉದ್ಯೋಗಿಗಳಿಗೆ ಕಿವಿಮಾತು ಹೇಳಿದೆ. ಇಂಥ ಸುಂದರ ಪುರುಷರು ರಹಸ್ಯ ಕಾರ್ಯಸೂಚಿಯನ್ನು ಹೊಂದಿರಬಹುದು ಎಂದು ಅದು ಹೇಳಿದೆ.
ಈ ಸಂಬಂಧ ಸರಕಾರವು ‘‘ಅಪಾಯಕಾರಿ ಪ್ರೀತಿ’’ ಎಂಬ ತಲೆಬರಹದ ಭಿತ್ತಿಪತ್ರವೊಂದನ್ನು ಹೊರಡಿಸಿದೆ. ಆ ಭಿತ್ರಿಪತ್ರದಲ್ಲಿ ಯುವ ಆಕರ್ಷಕ ಚೀನೀ ನಾಗರಿಕ ಸೇವೆ ಅಧಿಕಾರಿ ಕ್ಸಿಯಾವೊ ಲಿ ಎಂಬವರ ಕತೆಯನ್ನು ಬರೆಯಲಾಗಿದೆ.
ಚೀನಾದ ಈ ಮಹಿಳಾ ಅಧಿಕಾರಿಗೆ ಡಿನ್ನರ್ ಪಾರ್ಟಿಯೊಂದರಲ್ಲಿ ಡೇವಿಡ್ ಎಂಬ ವಿದೇಶಿಯೊಬ್ಬನ ಪರಿಚಯವಾಯಿತು ಹಾಗೂ ಅವರಿಬ್ಬರ ನಡುವೆ ಪ್ರೀತಿ ಬೆಳೆಯಿತು. ತನ್ನನ್ನು ಸಂದರ್ಶಕ ಅಧ್ಯಯನಕಾರ ಎಂಬುದಾಗಿ ಪರಿಚಯಿಸಿಕೊಂಡ ಡೇವಿಡ್ ಓರ್ವ ವಿದೇಶಿ ಗೂಢಚಾರಿಯಾಗಿದ್ದ. ಕ್ಸಿಯಾವೊ ತನ್ನ ಕಚೇರಿಯಲ್ಲಿದ್ದ ರಹಸ್ಯ ಆಂತರಿಕ ಮಾಹಿತಿಯನ್ನು ಆತನಿಗೆ ನೀಡಿದಳು. ಬಳಿಕ ಆ ಇಬ್ಬರನ್ನು ಬಂಧಿಸಲಾಯಿತು.
ಪ್ರಥಮ ರಾಷ್ಟ್ರೀಯ ಭದ್ರತಾ ಶಿಕ್ಷಣ ದಿನಾಚರಣೆ ಸಂದರ್ಭದಲ್ಲಿ ಚೀನಾ ಈ ರೀತಿಯ ಪ್ರಚಾರ ಅಭಿಯಾನವನ್ನು ಕೈಗೊಂಡಿದೆ.