ಪಿಎಫ್ ಅಧಿಸೂಚನೆ ರದ್ದು
ಹೈದರಾಬಾದ್,ಎ.19: ಕಾರ್ಮಿಕ ವಲಯದಿಂದ ವ್ಯಕ್ತವಾದ ಭಾರೀ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಕೇಂದ್ರ ಸರಕಾರ ಭವಿಷ್ಯನಿಧಿ ಹಣ ವಾಪಸು ಪಡೆಯಲು ನಿಯಮಾವಳಿಗಳನ್ನು ಬಿಗಿಗೊಳಿಸಿ ತಾನು ಹೊರಡಿಸಿದ್ದ ಆದೇಶವನ್ನು ಹಿಂದೆಗೆದುಕೊಂಡಿದೆ.
ಮಂಗಳವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು, 2016, ಫೆ.16ರಂದು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದುಗೊಳಿಸ ಲಾಗಿದೆ. ಇನ್ನು ಮುಂದೆ ಹಳೆಯ ಪದ್ಧತಿಯೇ ಮುಂದುವರಿಯಲಿದೆ ಎಂದು ಪ್ರಕಟಿಸಿದರು. ಇದಕ್ಕಾಗಿ ಇಪಿಎಫ್‌ಒ ಕೇಂದ್ರೀಯ ವಿಶ್ವಸ್ಥರ ಮಂಡಳಿಯಿಂದ ಅನುಮೋದನೆ ಪಡೆದುಕೊಳ್ಳುವುದಾಗಿ ತಿಳಿಸಿದರು.
ಕಾರ್ಮಿಕ ಒಕ್ಕೂಟಗಳ ಮೇರೆಗೆ ನೂತನ ನಿಯಮಾವಳಿಗಳನ್ನು ಹಿಂದೆಗೆಯುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪಿಎಫ್ ವಾಪಸಾತಿ ನಿಯಮಗಳನ್ನು ಕಠಿಣಗೊಳಿಸುವ ಈ ಮೊದಲಿನ ನಿರ್ಧಾರವನ್ನೂ ಕಾರ್ಮಿಕ ಒಕ್ಕೂಟಗಳ ಅಭಿಪ್ರಾಯಗಳ ಮೇರೆಗೇ ತೆಗೆದುಕೊಳ್ಳಲಾಗಿತ್ತು. ಈಗ ಅವೇ ಒಕ್ಕೂಟಗಳು ವಿನಂತಿಸಿಕೊಂಡಿದ್ದು, ನಿರ್ಧಾರವನ್ನು ನಾವು ಹಿಂದೆಗೆದುಕೊಂಡಿದ್ದೇವೆ ಎಂದು ಬಂಡಾರು ತಿಳಿಸಿದರು.