ಅಸ್ಥಿರ ಆಡಳಿತದಿಂದ ದೇಶವು ನಲುಗುತ್ತಿದೆ ಮೋದಿಗೆ ಶಿವಸೇನೆ ತರಾಟೆ
ಮುಂಬೈ,ಎ.19: ಗುಜರಾತ್ ಮತ್ತು ದೇಶದ ಇತರ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಗಳವಾರ ತರಾಟೆಗೆತ್ತಿಕೊಂಡಿರುವ ಮಿತ್ರಪಕ್ಷ ಶಿವಸೇನೆಯು,ಮೋದಿಯವರು ಶಾಂತಿಯ ಹರಿಕಾರನಾಗಿ ವಿದೇಶಗಳನ್ನು ಸುತ್ತುತ್ತಿದ್ದರೆ ಇತ್ತ ದೇಶವು ಅಸ್ಥಿರ ಆಡಳಿತದಿಂದಾಗಿ ನಲುಗುತ್ತಿದೆ ಎಂದು ಸುಳಿವು ನೀಡಿದೆ.
ಮೋದಿ ಶಾಂತಿಯ ಸಂದೇಶ ಹೊತ್ತು ವಿಶ್ವ ಪರ್ಯಟನೆ ಮಾಡುತ್ತಿದ್ದರೆ ಇಲ್ಲಿ ಅವರ ತವರು ರಾಜ್ಯ ಗುಜರಾತ್ ಹೊತ್ತಿ ಉರಿಯುತ್ತಿದೆ. ಜನರ ಮನಸ್ಸಿನಲ್ಲಿ ಏನಿದೆ ಎನ್ನುವುದು ಅದು ಗುಜರಾತಿನಲ್ಲಿ ವ್ಯಕ್ತವಾಗುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಪೊಲೀಸರು ಕೈಗಳಲ್ಲಿ ಬಂದೂಕು ಹಿಡಿದುಕೊಂಡು ಶಾಂತಿಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂದರೆ ಇದು ಸ್ಥಿರ ಆಡಳಿತದ ಸಂಕೇತವಲ್ಲ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ' ತನ್ನ ಮಂಗಳವಾರದ ಸಂಚಿಕೆಯ ಸಂಪಾದಕೀಯ ಲೇಖನದಲ್ಲಿ ಹೇಳಿದೆ.
ಛತ್ತೀಸ್‌ಗಡದಲ್ಲಿ ನಕ್ಸಲರು ಹಾವಳಿಯೆಬ್ಬಿಸಿದ್ದಾರೆ. ಅತ್ತ ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯುಂಟಾಗಿದ್ದು,ಆಡಳಿತ ವ್ಯತ್ಯಯಗೊಂಡಿದೆ. ದೇಶವಿರೋಧಿಗಳು ವಿಜೃಂಭಿಸುತ್ತಿದ್ದಾರೆ ಎಂದು ಬೆಟ್ಟು ಮಾಡಿರುವ ಸಂಪಾದಕೀಯವು, ಬಿಜೆಪಿಯು ಒಂದಡೆ ದೇಶಪ್ರೇಮ ಘೋಷಣೆಗಳನ್ನು ಕೂಗದವರಿಗೆ ಈ ದೇಶದಲ್ಲಿ ಉಳಿಯುವ ಹಕ್ಕಿಲ್ಲ ಎಂದು ಹೇಳುತ್ತಿದೆ. ಇನ್ನೊಂದೆಡೆ ಇದೇ ಬಿಜೆಪಿಯು 'ಭಾರತ್ ಮಾತಾ ಕಿ ಜೈ'ಎಂದು ಹೇಳಲು ನಿರಾಕರಿಸುವ ಜನರನ್ನೊಳಗೊಂಡಿರುವ ಸರಕಾರದ ಭಾಗವಾಗಿದೆ ಎಂದು ಟೀಕಿಸಿದೆ.
ಪಟೇಲ್ ಚಳವಳಿಯ ನಾಯಕ ಹಾರ್ದಿಕ ಪಟೇಲ್ ಅವರು ಮೀಸಲಾತಿಯ ಹೆಸರಿನಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಬಹುದು. ಆದರೆ ಅವರ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಿ ಅವರನ್ನು ಜೈಲಿಗೆ ತಳ್ಳಿರುವುದು ಸರಿಯೇ ಎಂದು ಸೇನೆಯು ಪ್ರಶ್ನಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನವು ಸರಕಾರ ರಚಿಸಬೇಕು ಎಂದು ಬಯಸುತ್ತಿರುವವರ ಜೊತೆ ಬಿಜೆಪಿ ಹೈಕಮಾಂಡ್ ಮಾತುಕತೆಗಳನ್ನು ನಡೆಸುತ್ತದೆ. ಆದರೆ ಗುಜರಾತ್‌ನಲ್ಲಿಯ ತನ್ನದೇ ಜನರೊಂದಿಗೆ ಮಾತನಾಡಲು ಅದಕ್ಕೆ ಪ್ರತಿಷ್ಠೆಯ ಸಮಸ್ಯೆ ಕಾಡುತ್ತಿದೆ. ಇದು ಸಮರ್ಥ ಆಡಳಿತಗಾರನ ಲಕ್ಷಣವಲ್ಲ ಎಂದು ಅದು ಕುಟುಕಿದೆ.
ಮೋದಿಯವರನ್ನು ಬೆಂಬಲಿಸಿದ್ದ ಯುವಜನರು ಈಗ ಹಾರ್ದಿಕ್ ಬಿಡುಗಡೆಗೆ ಆಗ್ರಹಿಸಿ ಅದೇ ಮೋದಿಯವರ ವಿರುದ್ಧ ಬೀದಿಗಿಳಿಯುತ್ತಿದ್ದಾರೆ ಎಂದಿರುವ ಸೇನೆಯು, ಹಾರ್ದಿಕ್ ಮತ್ತು ಕನ್ಹಯ್ಯಾ ಕುಮಾರ್‌ರಂತಹ ಜನರು ಸವಾಲುಗಳನ್ನು ಒಡ್ಡಿದ್ದಾರೆ. ನೀವು(ಬಿಜೆಪಿ) ಶಾಂತವಾಗಿ ಕುಳಿತುಕೊಂಡು ನಿಮ್ಮೆಲ್ಲ ಪ್ರತಿಷ್ಠೆಯನ್ನು ಬದಿಗಿರಿಸಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದೆ.