×
Ad

ಎಸ್ಸೆಮ್ಮೆಸ್, ಕರೆ ಹಾಗೂ ಸ್ಥಳ ವಿವರ ಕೂಡಾ ಹ್ಯಾಕ್ ಮಾಡಲು ಸಾಧ್ಯ

Update: 2016-04-19 23:56 IST

ಹೊಸದಿಲ್ಲಿ, ಎ.19: ವಿಸ್ತೃತ ವರ್ಗಕ್ಕೆ ಒಳಿತು ಮಾಡುವ ನೆಪದಲ್ಲಿ ಅಮೆರಿಕ ಹಾಗೂ ಬ್ರಿಟನ್ ಸರಕಾರಗಳು ನಾಗರಿಕರನ್ನು ಸಾಮೂಹಿಕ ಅನ್ವೇಷಣೆಗೆ ಗುರಿಪಡಿಸುವ ಮೂಲಕ ಖಾಸಗಿತನದ ಮೇಲೆ ಅತಿಕ್ರಮಣ ಮಾಡುತ್ತಿವೆ ಎಂದು ಅಮೆರಿಕದ ಖ್ಯಾತ ಕಂಪ್ಯೂಟರ್ ತಜ್ಞ ಎಡ್ವರ್ಡ್ ಸ್ನೋಡೆನ್‌ಬಹಿರಂಗಪಡಿಸಿದ್ದಾರೆ. ಇದರ ಜತೆಗೆ ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ನಿಮ್ಮ ಖಾಸಗಿ ಜೀವನದ ಎಲ್ಲ ವಿವರಗಳನ್ನು ಹ್ಯಾಕ್ ಮಾಡಲು ಮುಂದಾಗಿವೆ ಎಂದು ಆಪಾದಿಸಿದ್ದಾರೆ.

ಈ ಹ್ಯಾಕರ್ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಜನಸಾಮಾನ್ಯರ ಸ್ಥಳದ ಗುರುತಿಸುವಿಕೆ, ಅವರಿಂದ ಹೊರಹೋದ ಹಾಗೂ ಅವರಿಗೆ ಬಂದ ಎಸ್ಸೆಮ್ಮೆಸ್ ಸಂದೇಶಗಳ ವಿವರ, ಲಾಗ್, ದಾಖಲೆಗಳ ವಿವರ ಪಡೆಯಲು ಸಾಧ್ಯವಿದೆ. ಜತೆಗೆ ಅವರ ಕರೆಗಳನ್ನು ಆಲಿಸಲು ಕೂಡಾ ಅವಕಾಶವಿದೆ. ಇವೆಲ್ಲಕ್ಕೂ ಕೇವಲ ದೂರವಾಣಿ ಸಂಖ್ಯೆಯಷ್ಟೇ ಗೊತ್ತಿದ್ದರೆ ಸಾಕಾಗುತ್ತದೆ ಎಂದು ವರದಿಯೊಂದರಲ್ಲಿ ವಿವರಿಸಿದ್ದಾರೆ.
ಇಂಥ ಅನ್ವೇಷಣೆ ವಿರುದ್ಧ ಗ್ರಾಹಕರು ಯಾವ ಸುರಕ್ಷೆಯನ್ನೂ ಪಡೆಯುವಂತಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡುವಂತೆಯೂ ಇಲ್ಲ; ನೆಟ್‌ವರ್ಕ್‌ನಿಂದಲೇ ಈ ಹ್ಯಾಕಿಂಗ್ ಆಗಲಿದ್ದು, ಫೋನ್ ಬಳಕೆ ಮಾಡಿದರೂ, ಮಾಡದಿದ್ದರೂ ಹ್ಯಾಕಿಂಗ್ ಸಾಧ್ಯವಿದೆ ಎಂದು ಹೇಳಲಾಗಿದೆ.
1975ರಲ್ಲಿ ಅಭಿವೃದ್ಧಿಪಡಿಸಿದ ಶಿಷ್ಟಾಚಾರವಾದ ಸಿಗ್ನಲಿಂಗ್ ಸಿಸ್ಟಂ ನಂ.7 ಬಳಸಿಕೊಂಡು ಈ ಹ್ಯಾಕಿಂಗ್ ಮಾಡಲು ಸಾಧ್ಯವಿದೆ. ಇದು ದೂರವಾಣಿ ಸಂಖ್ಯೆಯನ್ನು ತಿಳಿದುಕೊಂಡಷ್ಟೇ ಸುಲಭವಾಗಿ ಸಂದೇಶ, ಕರೆ ಹಾಗೂ ಸ್ಥಳವಿವರವನ್ನು ನೀಡುತ್ತದೆ.
ಅದಾಗ್ಯೂ ಅಂಥ ದೊಡ್ಡ ಪ್ರಮಾಣದ ಹ್ಯಾಕಿಂಗ್ ನಡೆಯುತ್ತಿರುವುದು ಇದೇ ಮೊದಲಲ್ಲ. ಕನಿಷ್ಠ ಬ್ರಿಟನ್‌ನಲ್ಲಾದರೂ ಎಲ್ಲ ಬಳಕೆದಾರರು ಯಾವುದೇ ಸುರಕ್ಷೆ ಹೊಂದಿಲ್ಲ ಎನ್ನುವುದು ಸಾಬೀತಾಗಿದೆ. 2015ರಲ್ಲಿ ನಡೆದ ಹ್ಯಾಕರ್ ಸಮ್ಮೇಳನದಲ್ಲಿ ಈ ವಿಧಾನವನ್ನು ಮೊದಲ ಬಾರಿಗೆ ಬಹಿರಂಗಪಡಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಈ ವ್ಯವಸ್ಥೆ ಮತ್ತಷ್ಟು ದೃಢವಾಗಿ ಬೆಳೆದಿರುವ ಎಲ್ಲ ಸಾಧ್ಯತೆಯೂ ಇದೆ.

ಸುರಕ್ಷೆ ಹೇಗೆ?: ಹೀಗೆ ನಿಮ್ಮ ವೈಯಕ್ತಿಕ ಕರೆ ಹಾಗೂ ಸಂದೇಶಗಳು ಹ್ಯಾಕ್ ಆಗದಂತೆ ತಡೆಯಲು ಇರುವ ಏಕೈಕ ಸುರಕ್ಷಾ ವಿಧಾನವೆಂದರೆ, ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳುವುದು ಹಾಗೂ ದೂರವಾಣಿ ಕರೆಗಳಿಗೆ ಕರೆ ಮಾಡುವ ಆ್ಯಪ್‌ಗಳಾದ ಟೆಲಿಗ್ರಾಂ, ವಾಟ್ಸ್‌ಆ್ಯಪ್, ಐಮೆಸೇಜ್ ಹಾಗೂ ಫೇಸ್‌ಟೈಮ್‌ಗಳನ್ನು ಬಳಸುವುದು.
ಆಪಲ್, ಮೈಕ್ರೊಸಾಪ್ಟ್, ಗೂಗಲ್ ಹಾಗೂ ಫೇಸ್‌ಬುಕ್‌ನಂಥ ಕಂಪೆನಿಗಳಿಗೆ ನಾಗರಿಕರ ಖಾಸಗಿತನ ಮುಖ್ಯವಾಗಿದ್ದು ಇದಕ್ಕಾಗಿ ಧ್ವನಿ ಎತ್ತಬೇಕಾಗಿದೆ. ಆದರೆ ಇವುಗಳು ಉಗ್ರಗಾಮಿ ಗುಂಪುಗಳ ಸಂವಹನಕ್ಕೂ ವೇದಿಕೆಯಾಗಿರುವುದರಿಂದ ಇವುಗಳ ಮೇಲೆ ನಿಗಾ ಇಡದಿದ್ದರೆ, ಖಾಸಗಿತನ ರಕ್ಷಣೆ ಹೆಸರಿನಲ್ಲಿ ಹಲವು ಜೀವಗಳಿಗೆ ಅಪಾಯ ಎದುರಾಗುವ ಸಾಧ್ಯತೆಯೂ ಇದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News