ಕಾಬೂಲ್: ಭೀಕರ ಟ್ರಕ್ ಬಾಂಬ್ ಸ್ಫೋಟ; 30 ಸಾವು
ಕಾಬೂಲ್, ಎ. 19: ಬಾಂಬ್‌ಗಳಿಂದ ತುಂಬಿದ್ದ ಟ್ರಕ್ಕೊಂದು ಮಂಗಳವಾರ ಮಧ್ಯ ಕಾಬೂಲ್‌ನಲ್ಲಿ ಸ್ಫೋಟಗೊಂಡಾಗ ಹಾಗೂ ಬಳಿಕ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆ.
ಜನಭರಿತ ಪ್ರದೇಶದಲ್ಲಿ ನಡೆದ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ.
ಸ್ಫೋಟದಿಂದಾಗಿ ದಟ್ಟ ಕರಟು ವಾಸನೆಯ ಹೊಗೆ ಆಕಾಶವನ್ನು ವ್ಯಾಪಿಸಿತು. ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿನ ಕಟ್ಟಡಗಳ ಕಿಟಿಕಿ ಗಾಜುಗಳು ಒಡೆದವು.
ರಕ್ಷಣಾ ಸಚಿವಾಲಯದ ಸಮೀಪ ನಡೆದ ಈ ಭೀಕರ ದಾಳಿಯು, ಈ ವರ್ಷದ ಹೋರಾಟದ ಋತುವನ್ನು ಉಗ್ರರು ಘೋಷಿಸಿದ ಬಳಿಕ ಅಫ್ಘಾನ್ ರಾಜಧಾನಿಯಲ್ಲಿ ನಡೆದ ಪ್ರಥಮ ಬೃಹತ್ ತಾಲಿಬಾನ್ ದಾಳಿಯಾಗಿದೆ.
‘‘ಸ್ಫೋಟಕಗಳಿಂದ ತುಂಬಿದ್ದ ಟ್ರಕ್ಕನ್ನು ಓರ್ವ ಆತ್ಮಹತ್ಯಾ ದಾಳಿಕೋರ ಸರಕಾರಿ ಕಟ್ಟಡವೊಂದರ ಪಕ್ಕದ ಸಾರ್ವಜನಿಕ ವಾಹನ ನಿಲುಗಡೆ ಸ್ಥಳದಲ್ಲಿ ಸ್ಫೋಟಿಸಿದನು’’ ಎಂದು ಕಾಬೂಲ್ ಪೊಲೀಸ್ ಮುಖ್ಯಸ್ಥ ಅಬ್ದುಲ್ ರಹಮಾನ್ ರಹೀಮಿ ಸುದ್ದಿಗಾರರಿಗೆ ತಿಳಿಸಿದರು.
ಎರಡನೆ ದಾಳಿಕೋರ ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗ ನಡೆಸಿದನು. ಅಂತಿಮವಾಗಿ ಆತನನ್ನು ಹೊಡೆದುರುಳಿಸ ಲಾಯಿತು.