×
Ad

ಉದ್ದ ಕೂದಲು ಹಾಗೂ ಅದರ ಕೆಳಗೆ ಮೆದುಳು ಎಂಬ ವಸ್ತುವಿದೆ!

Update: 2016-04-20 15:15 IST

ಸ್ಯಾಕ್ರಮೆಂಟೊ, ಎ. 20: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ವಿಮಾನ ನಿಲ್ದಾಣವೊಂದರಲ್ಲಿ ಅಲ್ಲಿನ ಸಿಬ್ಬಂದಿ ಹದಿಹರೆಯದ ಸಿಖ್-ಅಮೆರಿಕನ್ ವ್ಯಕ್ತಿಯೊಬ್ಬರ ಪೇಟವನ್ನು ತೆಗೆಸಿದ ಘಟನೆ ವರದಿಯಾಗಿದೆ.

ನ್ಯೂಜರ್ಸಿಯ 18 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ಕರಣ್‌ವೀರ್ ಸಿಂಗ್ ಪನ್ನು, ತನ್ನ ಸಮುದಾಯದ ವಿದ್ಯಾರ್ಥಿಗಳ ವಿರುದ್ಧ ನಡೆಯುತ್ತಿರುವ ಪೀಡನೆ (ಬುಲಿಯಿಂಗ್)ಯ ಬಗ್ಗೆ ‘ಬುಲಿಯಿಂಗ್ ಆಫ್ ಸಿಖ್ ಅಮೆರಿಕನ್ ಚಿಲ್ಡ್ರನ್: ತ್ರೂ ದ ಅಯ್ಸೆ ಆಫ್ ಅ ಸಿಖ್ ಅಮೆರಿಕನ್ ಹೈಸ್ಕೂಲ್ ಸ್ಟೂಡೆಂಟ್’ ಎಂಬ ಪುಸ್ತಕ ಬರೆದಿದ್ದಾರೆ.

ಕ್ಯಾಲಿಫೋರ್ನಿಯದ ಬೇಕರ್ಸ್‌ಫೀಲ್ಡ್‌ನಲ್ಲಿ ನಡೆದ ವಾರ್ಷಿಕ ಸಿಖ್ ಯುವ ಸಮ್ಮೇಳನದಲ್ಲಿ ತನ್ನ ಪುಸ್ತಕದ ಬಗ್ಗೆ ಮಾತನಾಡುವುದಕ್ಕಾಗಿ ಅವರು ಹೋಗಿದ್ದರು.

‘‘ವಿಮಾನ ನಿಲ್ದಾಣದಲ್ಲಿ ಲೋಹಶೋಧಕವನ್ನು ಹಾದು ಹೋದ ಬಳಿಕ, ನನ್ನ ಪೇಟವನ್ನು ಸ್ವತಃ ತಟ್ಟುವಂತೆ ಹಾಗೂ ಸ್ಫೋಟಕ ಸಾಮಗ್ರಿಗಳ ತಪಾಸಣೆಗಾಗಿ ರಾಸಾಯನಿಕ ಮಿಶ್ರಿತ ಹತ್ತಿ ಉಂಡೆ ಪರೀಕ್ಷೆ ನಡೆಸುವಂತೆ ನನಗೆ ಸಿಬ್ಬಂದಿ ಸೂಚಿಸಿದರು. ಸಕಾರಾತ್ಮಕ ಹತ್ತಿ ಉಂಡೆ ಪರೀಕ್ಷೆಯ ಬಳಿಕ, ದೇಹದ ಸಂಪೂರ್ಣ ತಟ್ಟುವಿಕೆಗಾಗಿ ನನ್ನನ್ನು ಎರಡನೆ ತಪಾಸಣೆ ಕೊಠಡಿಗೆ ಕರೆದೊಯ್ದರು. ಅಲ್ಲಿ ಪೂರ್ಣ ತಪಾಸಣೆಗಾಗಿ ನನ್ನ ಮುಂಡಾಸನ್ನು ತೆಗೆಯುವಂತೆ ಸೂಚಿಸಿದರು’’ ಎಂದು ಪನ್ನು ಹೇಳಿರುವುದಾಗಿ ಎನ್‌ಬಿಸಿ.ಕಾಮ್ ವರದಿ ಮಾಡಿದೆ.

‘‘ಮೊದಲು ನಾನು ನಿರಾಕರಿಸಿದೆ. ಆದರೆ, ಪೇಟ ತೆಗೆಯದಿದ್ದರೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದಾಗ ನಾನು ಒಪ್ಪಿದೆ. ಆದರೆ, ನನ್ನ ಪೇಟವನ್ನು ಮತ್ತೆ ಕಟ್ಟಲು ನನಗೆ ಕನ್ನಡಿ ಕೊಡಬೇಕೆಂಬ ಶರತ್ತು ಮುಂದಿಟ್ಟೆ’’ ಎಂದರು.

‘‘ನಾನು ಪೇಟವನ್ನು ತೆಗೆಯುವ ಮುನ್ನ ಏಜಂಟ್ ಹರ್ನಾಂಡಿಸ್ ಭಯಾನಕ ಪ್ರಶ್ನೆಯೊಂದನ್ನು ಕೇಳಿದರು- ‘ನೀವು ಪೇಟವನ್ನು ತೆಗೆಯುವ ಮುನ್ನ ನಾವು ಜಾಗರೂಕತೆಯಿಂದ ಇರಬೇಕಾದ ಏನಾದರೂ ಅದರೊಳಗೆ ಇದೆಯೇ?’ ನಾನು ನಯವಾಗಿ ಉತ್ತರಿಸಿದೆ- ಅಲ್ಲಿ ಉದ್ದ ಕೂದಲಿದೆ ಹಾಗೂ ಅದರ ಕೆಳಗೆ ಮೆದುಳು ಎಂದು ಕರೆಯಲ್ಪಡುವ ವಸ್ತುವಿದೆ’’.

‘‘ಈ ಘಟನೆಯಿಂದ ನನಗೆ ಅವಮಾನವಾಗಿದೆ, ಆತ್ಮವಿಶ್ವಾಸ ಕುಸಿದಿದೆ’’ ಎಂದು ಪನ್ನು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News