×
Ad

ರಸಾಯನ ಶಾಸ್ತ್ರ ಪಾಠ ಕಲಿಯಲು ಸಿಐಡಿ ಎಕ್ಸ್‌ಪರ್ಟ್ ಕಾಲೇಜಿಗೆ ‘ಭೇಟಿ’ ನೀಡಿತೇ?

Update: 2016-04-20 23:37 IST

ಮಾನ್ಯರೆ,
 ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಮೇಲೆ ಯಾವುದೇ ಸಿಐಡಿ ದಾಳಿ ನಡೆದಿಲ್ಲ. ಸಿಐಡಿ ಅಧಿಕಾರಿಗಳು ಭೇಟಿ ಕೊಟ್ಟು ಕೆಲವೊಂದು ಮಾಹಿತಿಗಳನ್ನು ಕೇಳಿದ್ದರು. ಆ ಮಾಹಿತಿಯನ್ನು ತಕ್ಷಣ ನೀಡಿ ಪ್ರಕರಣದ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್ ನಾಯಕ್ ಅವರು ಪತ್ರಿಕಾ ಪ್ರಕಟನೆ ನೀಡಿದ್ದನ್ನು ಗಮನಿಸಿದೆ. ರಾಜ್ಯದಲ್ಲಿ ಸಾವಿರಾರು ಪಿಯು ಕಾಲೇಜುಗಳಿವೆ. ಆ ಪೈಕಿ ಸಿಐಡಿಯವರು ಎಕ್ಸ್ ಪರ್ಟ್ ಸಹಿತ 11 ಕಾಲೇಜುಗಳಿಗೆ ಮಾತ್ರ ಯಾಕೆ ದಾಳಿ (ಅಲ್ಲಲ್ಲ ಭೇಟಿ )ಮಾಡಿದರು? ಏನಿದೆ ಅಂತಹ ವಿಶೇಷ ಈ ಕಾಲೇಜುಗಳಲ್ಲಿ? ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ ಇವರ ಕಾಲೇಜಿಗೆ ಹೋಗಿ ಕಾಲೇಜಿನ ವಿದ್ಯಾರ್ಥಿಗಳ, ಶಿಕ್ಷಕರ ಕೊನೆಗೆ ಜವಾನರ ವಿವರಗಳನ್ನೂ ಚೂರು ಬಿಡದಂತೆ ಕೇಳಿ ಪಡೆದಿದೆ ಎಂದರೆ ಅದರ ಅರ್ಥವೇನು? ಅಂತಹ ಯಾವ ಘನಂದಾರಿ ಕೆಲಸ ಈ ಕಾಲೇಜಿನಲ್ಲಿ ನಡೆದಿದೆ? ಅಥವಾ ರಸಾಯನ ಶಾಸ್ತ್ರ ಪಾಠ ಕಲಿಯಲು ಸಿಐಡಿ ಸಿಬ್ಬಂದಿ ಅಲ್ಲಿಗೆ ಬಂದರೆ?

ಇದು ಎಕ್ಸ್‌ಪರ್ಟ್‌ನಲ್ಲಿರುವ ಹಾಗೂ ಈ ರಾಜ್ಯದ ಎಲ್ಲ ಪಿಯು ಕಾಲೇಜುಗಳಲ್ಲಿರುವ ಹಾಗೂ ಈಗಾಗಲೇ ಕಲಿತು ಹೊರಬಂದಿರುವ ಲಕ್ಷಾಂತರ ವಿದ್ಯಾರ್ಥಿಗಳ, ಅವರ ದುಡಿಯುವ ಅಪ್ಪ ಅಮ್ಮಂದಿರ ಬದುಕಿನ, ಗೌರವದ, ಅಸ್ತಿತ್ವದ ಪ್ರಶ್ನೆಯಾಗಿದೆ. ಎಕ್ಸ್‌ಪರ್ಟ್‌ನಂತಹ ಕಾಲೇಜು ಮಾಲಕರ ಪ್ರತಿಷ್ಠೆಯ ಪ್ರಶ್ನೆ ಅಲ್ಲ ಇದು. ಈವರೆಗೆ ಸಿಐಡಿ ಈ ಹಗರಣದಲ್ಲಿ ಸಮರ್ಪಕವಾಗಿ ತನಿಖೆ ನಡೆಸುತ್ತಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅದು ತನಿಖೆಯನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಈ ಹಗರಣದಲ್ಲಿ ಅದೆಷ್ಟೇ ದೊಡ್ಡವರಿರಲಿ ಅವರನ್ನು ಕಾನೂನಿನ ಎದುರು ತರಬೇಕು. ದುಡ್ಡು, ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವವರಿಗೆ ಉಗ್ರ ಶಿಕ್ಷೆಯಾಗಬೇಕು. ಅಂತಹವರು ಮುಂದೆ ಯಾವುದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಬೇಕು. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ರಾಜ್ಯ ಸರಕಾರ ಒಳಗಾಗಬಾರದು. ಸರಕಾರದ ಗೌರವಕ್ಕೂ, ರಾಜ್ಯದ ಹೆಸರಿಗೂ ಮಸಿ ಬಳಿಯುವ ಇಂತಹ ಕೆಲಸ ಮಾಡಿದವರನ್ನು ಮುಲಾಜಿಲ್ಲದ ಸದೆ ಬಡಿಯಬೇಕು. ಕಿಮ್ಮನೆಯವರು ಹಾಗೂ ಸಿಐಡಿ ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಲಿ.

Writer - -ರವಿಶಂಕರ್ ಎಸ್. ಮೈಸೂರು

contributor

Editor - -ರವಿಶಂಕರ್ ಎಸ್. ಮೈಸೂರು

contributor

Similar News