×
Ad

9/11 ದಾಳಿಯಲ್ಲಿ 'ಸೌದಿ ಶಾಮೀಲು' ಕುರಿತ ರಹಸ್ಯ ವರದಿ ಬಹಿರಂಗ ?

Update: 2016-04-21 11:39 IST

  ರಿಯಾಧ್ : ಸೆಪ್ಟೆಂಬರ್ 11ರ ವಿಶ್ವ ವಾಣಿಜ್ಯ ಕೇಂದ್ರ ದಾಳಿಗೂ ಅರಬ್ ರಾಷ್ಟ್ರಗಳಿಗೂ ಇದ್ದಿರಬಹುದಾಗಿದ್ದ ಸಂಬಂಧಗಳ ಬಗ್ಗೆ ಮಾಹಿತಿಗಳು ಹೊರಬೀಳುತ್ತಿದ್ದಂತೆಯೇ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಇಂದು ಬೆಳಿಗ್ಗೆ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್-ಕೈದಾದ ಬಾಂಬ್ ತಯಾರಕ ಘಸ್ಸನ್-ಅಲ್-ಶರ್ಬಿಯ ಫ್ಲೈಟ್ ಸರ್ಟಿಫಿಕೇಟ್ ವಾಷಿಂಗ್ಟನ್ನಿನ ಸೌದಿ ದೂತಾವಾಸ ಕಚೇರಿಯ ಕವರ್ ಒಂದರಲ್ಲಿ ಅತನನ್ನು 2002ರಲ್ಲಿ ಬಂಧಿಸಿದಾಗ ಪತ್ತೆಯಾಗಿತ್ತು. ಇದರ ಹೊರತಾಗಿ ಕಾಂಗ್ರೆಶನಲ್ ವರದಿಯೊಂದರ 28 ಪುಟಗಳ ಭಾಗವನ್ನು ಬಹಿರಂಗಪಡಿಸಬೇಕೆಂದು ಕೂಡ ಒಬಾಮಾ ಒತ್ತಡ ಎದುರಿಸುತ್ತಿದ್ದು ಈ ವರದಿಯ ಭಾಗಗಳು 2000 ಮಂದಿಯನ್ನು ಬಲಿ ಪಡೆದ 2001ರ ವಿಮಾನ ಅಪಹರಣ ಹಾಗೂ ವಿಶ್ವ ವಾಣಿಜ್ಯ ಕೇಂದ್ರ ದಾಳಿಯ ಹಿಂದೆ ಸೌದಿಯ ಶಾಮೀಲಾತಿಯನ್ನು ಬೊಟ್ಟು ಮಾಡಲಿದೆಯೆಂದು ಹೇಳಲಾಗುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

 ಅಲ್-ಶರ್ಬಿ 9/11 ವಿಮಾನ ಅಪಹರಣಕಾರರೊಂದಿಗೆ ವಿಮಾನ ಹಾರಿಸಲು ಕಲಿತಿದ್ದರೂ ಆ ದಾಳಿಯಲ್ಲಿ ಭಾಗವಹಿಸಿಲ್ಲವೆನ್ನಲಾಗಿದ್ದು, ಆತನ ಬಂಧನವಾಗುವ ಸ್ವಲ್ಪ ಸಮಯ ಮೊದಲು ಆ ಸರ್ಟಿಫಿಕೇಟ್ ಸಹಿತ ಹಲವು ದಾಖಲೆಗಳನ್ನು ಆತ ಹುದುಗಿಟ್ಟಿದ್ದ, ಎಂದು ಮೇಲ್ ಆನ್‌ಲೈನ್ ವರದಿಯೊಂದು ತಿಳಿಸಿದೆ.

  ಈ ದಾಖಲೆಗಳನ್ನು ಅಮೆರಿಕಾದ ಅಧಿಕಾರಿಗಳು ನಂತರ ಪತ್ತೆ ಹಚ್ಚಿದ್ದು ಡಾಕ್ಯುಮೆಂಟ್ 17 ಎಂದು ಅದನ್ನು 2003ರಲ್ಲಿ ತಯಾರಿಸಲಾಗಿದ್ದು, ಅದನ್ನು ಯಾವುದೇ ಹೆಚ್ಚು ಪ್ರಚಾರವಿಲ್ಲದೆ ತನಿಖಾಕಾರರು ಕಳೆದ ವರ್ಷ ಬಿಡುಗಡೆಗೊಳಿಸಿದ್ದರು. ಈ ವಾರದ ಆರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಬ್ರಯಾನ್ ಮೆಕ್ ಗ್ಲಿಂಚೆ ಈ ಬಗ್ಗೆ ತನ್ನ ವೆಬ್ ಸೈಟಿನಲ್ಲಿ ಬರೆದ ನಂತರವಷ್ಟೇ ಸಾರ್ವಜನಿಕರ ಗಮನ ಅದರತ್ತ ಸೆಳೆಯಲಾಗಿತ್ತು, ಎಂದು ದಿ ಟೈಮ್ಸ್ ವರದಿ ಮಾಡಿದೆ.

 ‘‘ಸೌದಿ ಸರಕಾರದಲ್ಲಿ ಉನ್ನತ ಮಟ್ಟದಲ್ಲಿರುವವರು ಎಷ್ಟರ ಮಟ್ಟಿಗೆ 9/11 ದಾಳಿಕೋರರಿಗೆ ಸಹಕರಿಸಿದ್ದರು ಎಂಬ ಮೂಲಭೂತ ಪ್ರಶ್ನೆಯತ್ತ ಈ ದಾಖಲೆ ಬೊಟ್ಟು ಮಾಡುತ್ತದೆ,’’ ಎಂದು ಅವರು ಹೇಳಿದ್ದಾರೆ.

   ಸಂತ್ರಸ್ತರ ಕುಟುಂಬಗಳು ತಮ್ಮ ಪ್ರೀತಿಪಾತ್ರರ ಸಾವಿಗೆ ಸೌದಿ ಅರೇಬಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಆ ವರದಿಯನ್ನು ಬಹಿರಂಗಪಡಿಸಬೇಕೆಂದು ಈಗಾಗಲೇ ಅಮೆರಿಕನ್ ಕಾಂಗ್ರೆಸ್ಸಿಗೆ ಬೇಡಿಕೆಯಿಟ್ಟಿದ್ದಾರೆ. ಸೌದಿ ಅರೇಬಿಯಾದ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿಲ್ಲವೆಂದು ಈ ಹಿಂದಿನ ಕೋರ್ಟ್ ತೀರ್ಪುಗಳು ಹೇಳಿರುವುದರಿಂದ ಈ ವರದಿ ಬಹಿರಂಗ ಅತ್ಯಗತ್ಯವಾಗಿದೆಯೆನ್ನಲಾಗುತ್ತದೆ.

 ಒಟ್ಟಾರೆಯಾಗಿ ಈ ಬೆಳವಣಿಗೆ ಒಬಾಮಾರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು. 9/11 ದಾಳಿಯ ಸಂತ್ರಸ್ತ ಕುಟುಂಬಗಳು ಅವರು ಸೌದಿ ಅರೇಬಿಯಾ ಪರವಾಗಿದ್ದಾರೆಂದು ಆರೋಪಿಸುತ್ತಿದ್ದಾರೆ. ಅತ್ತ ತಮ್ಮ ದೇಶದ ವಿರುದ್ಧ ಕ್ರಮ ಕೈಗೊಂಡಿದ್ದೇ ಆದಲ್ಲಿ ತಮ್ಮಲ್ಲಿರುವ ನೂರಾರು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡುವುದಾಗಿ ಸೌದಿ ಅಧಿಕಾರಿಗಳು ಬೆದರಿಸಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News