ಸಂಪೂರ್ಣ ಪೊಲೀಸ್ ಗೌರವದೊಂದಿಗೆ ಭೂತಾಯಿಯ ಒಡಲು ಸೇರಿದ ‘ಶಕ್ತಿಮಾನ್’
ಡೆಹ್ರಾಡೂನ್,ಎ.21: ಬಿಜೆಪಿ ಶಾಸಕ ಗಣೇಶ್ ಜೋಶಿಯವರ ಹಲ್ಲೆಯಿಂದ ಗಾಯಗೊಂಡು,ಬಳಿಕ ಸಾವನ್ನಪ್ಪಿದ ಪೊಲೀಸ್ ಇಲಾಖೆಯ ಕುದುರೆ ‘ಶಕ್ತಿಮಾನ್’ ಅಂತ್ಯಕ್ರಿಯೆ ಬುಧವಾರ ಸಂಜೆ ಇಲ್ಲಿ ಸಂಪೂರ್ಣ ಪೊಲೀಸ್ ಗೌರವದೊಂದಿಗೆ ನೆರವೇರಿತು. ಶಕ್ತಿಮಾನ್ ಸಾವು ಮತ್ತೆ ಜನರಲ್ಲಿ ಆಕ್ರೋಶವನ್ನು ಸೃಷ್ಟಿಸಿದೆ.
ಜೋಶಿ ಹಲ್ಲೆಯಿಂದಾಗಿ ಹಿಂಗಾಲಿಗೆ ತೀವ್ರ ಗಾಯವಾಗಿದ್ದ ಶಕ್ತಿಮಾನ್‌ಗೆ ಗ್ಯಾಂಗ್ರಿನ್ ಬಾಧಿಸಿದ ನಂತರ ಕಾಲನ್ನು ಕತ್ತರಿಸಲಾಗಿತ್ತು. ಶಕ್ತಿಮಾನ್ ಮೇಲಿನ ಹಲ್ಲೆ ವಾರಗಳ ಕಾಲ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ನಡುವೆ ವಿವಾದದ ಕೇಂದ್ರಬಿಂದುವಾಗಿತ್ತು. ಉತ್ತರಾಖಂಡ್‌ನಲ್ಲಿ ಬಿಜೆಪಿಯ ಪ್ರತಿಭಟನೆ ಸಂದರ್ಭ ಕುದುರೆ ಗಾಯಗೊಂಡಿತ್ತು. ಅದರ ಮೇಲೆ ಕ್ರೌರ್ಯವೆಸಗಿದ ಆರೋಪದಲ್ಲಿ ಜೋಶಿಯವರನ್ನು ಕಳೆದ ತಿಂಗಳು ಬಂಧಿಸಿ,ಕೆಲವೇ ಸಮಯದಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಶಕ್ತಿಮಾನ್‌ಗೆ ಅಮೆರಿಕದಿಂದ ತರಿಸಲಾಗಿದ್ದ ಕೃತಕ ಕಾಲನ್ನು ಅಳವಡಿಸಲಾಗಿತ್ತು. ಅದರ ಚೇತರಿಕೆಯ ಪ್ರತಿಯೊಂದೂ ಹಂತವನ್ನು ಮಾಧ್ಯಮಗಳು ವರದಿ ಮಾಡುತ್ತಲೇ ಇದ್ದವು.