ನ್ಯೂಝಿಲೆಂಡ್ ವಿರುದ್ಧ ಹಗಲು-ರಾತ್ರಿ ಟೆಸ್ಟ್: ಬಿಸಿಸಿಐ ಗಂಭೀರ ಚಿಂತನೆ
ಹೊಸದಿಲ್ಲಿ, ಎ.21: ಪ್ರೇಕ್ಷಕರನ್ನು ಸ್ಟೇಡಿಯಂನತ್ತ ಸೆಳೆಯುವ ಉದ್ದೇಶದಿಂದ ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ನ್ಯೂಝಿಲೆಂಡ್‌ನ ವಿರುದ್ಧ ಮೊತ್ತ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸಲು ಬಿಸಿಸಿಐ ಗಂಭೀರ ಚಿಂತನೆ ನಡೆಸುತ್ತಿದೆ.
‘‘ಈ ವರ್ಷಾಂತ್ಯದಲ್ಲಿ ನ್ಯೂಝಿಲೆಂಡ್‌ನ ವಿರುದ್ಧ ಪಿಂಕ್ ಚೆಂಡಿನಲ್ಲಿ ಏಕೈಕ ಹಗಲು-ರಾತ್ರಿ ಪಂದ್ಯವನ್ನು ಆಡಲು ನಾವು ನಿರ್ಧರಿಸಿದ್ದೇವೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಪೂರ್ವ ತಯಾರಿ ನಡೆಸಲಿದ್ದೇವೆ’’ಎಂದು ಗುರುವಾರ ಬಿಸಿಸಿಐನ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
‘‘ಪಂದ್ಯದ ಸ್ಥಳವನ್ನು ಇನ್ನೂ ನಿಗದಿಪಡಿಸಿಲ್ಲ. ಇಬ್ಬನಿ ಕಾಟ ಸಹಿತ ನಾವು ಹಲವು ಅಂಶಗಳನ್ನು ಪರಿಗಣಿಸಬೇಕಾಗಿದೆ. ಭಾರತದ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಗುಲಾಬಿ ಬಣ್ಣದ ಚೆಂಡಿನಲ್ಲಿ ಹೇಗೆ ಬೌಲಿಂಗ್ ಮಾಡುತ್ತಾರೆಂದು ಗಮನಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ದುಲೀಪ್ ಟ್ರೋಫಿಯ ವೇಳೆ ಗಮನಿಸಲಾಗುತ್ತದೆ’’ ಎಂದು ಠಾಕೂರ್ ತಿಳಿಸಿದ್ದಾರೆ.