ಬಿಸಿಲ ಝಳಕ್ಕೆ ಸುಟ್ಟ ಗಾಯ: ಆಸ್ಪತ್ರೆ ಸೇರಿದ ಪೊಲೀಸ್!

Update: 2016-04-21 18:34 GMT

ಕಾಸರಗೋಡಿನಲ್ಲಿ ತೀವ್ರಗೊಂಡ ತಾಪಮಾನ

ಕಾಸರಗೋಡು, ಎ.21: ಬಿಸಿಲ ಝಳದಿಂದ ಕಂಗೆಟ್ಟಿರುವ ಜಿಲ್ಲೆ ಯಲ್ಲಿ ಜನತೆಯ ಬದುಕು ಅತಂತ್ರವಾಗಿದ್ದು, ಸೂರ್ಯನ ತಾಪಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕರಾವಳಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಕರುಣಾಕರ (46) ಗಾಯಗೊಂಡವರು.
ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡ ಕರುಣಾಕರರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಟಿದೆ. ಗಲ್ಫ್ ದೇಶಗಳಲ್ಲಿರುವ ಉಷ್ಣಾಂಶ ನಮ್ಮಲ್ಲೂ ಕಂಡು ಬರುತ್ತಿದ್ದು, ಫ್ಯಾನ್‌ಗಳಿಂದಲೂ ಈ ಸೆಕೆಯನ್ನು ತಡೆಯಲು ಆಗುತ್ತಿಲ್ಲ. ವಿದ್ಯುತ್ ಇಲ್ಲದೆ ಮನೆಯೊಳಗೆ ಕುಳಿತುಕೊಳ್ಳುವುದು ಅಸಾಧ್ಯ ಎಂಬಂತಾಗಿದೆ. ಕೆಲ ದಿನಗಳಿಂದ ರಾಜ್ಯದ ಕೆಲವೆಡೆ 40 ಡಿಗ್ರಿಗೂ ಅಧಿಕ ತಾಪಮಾನವಿದೆ.

ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಹೊಳೆ, ಬಾವಿ, ಕೆರೆಗಳು ಬತ್ತಿ ಬರಡಾಗಿದ್ದು, ಹಲವಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ತೆರೆದ ಸ್ಥಳಗಳಲ್ಲಿನ ಕೆಲಸಕ್ಕೆ ಮಧ್ಯಾಹ್ನ 12ರಿಂದ 3ರ ತನಕ ವಿಶ್ರಾಂತಿ ನೀಡಲು ಕಾರ್ಮಿಕ ಇಲಾಖೆ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News