×
Ad

ಮೋದಿಯನ್ನು ಟೀಕಿಸಬೇಡಿ !

Update: 2016-04-22 11:24 IST

ನವದೆಹಲಿ, ಎ.22: ತೆಹಲ್ಕಾ ಪತ್ರಿಕೆಯ ಉದ್ಯೋಗಿಗಳು ಸಂಕಷ್ಟದಿಂದಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಚೇರಿಗೆ ಪ್ರವೇಶಿಲು ಬಿಟ್ಟಿಲ್ಲ. ಹೆಚ್ಚಿನವರು ಕಳೆದ ಮೂರು ತಿಂಗಳಿಗಳಿಂದ ವೇತನ ಪಡೆದಿಲ್ಲ. ಬಿಜೆಪಿ ಹಾಗೂ ಬಲಪಂಥೀಯ ಹಿಂದುತ್ವ ಸಂಘಟನೆಗಳನ್ನು ಟೀಕಿಸದಂತೆ ತಮಗೆ ಫರ್ಮಾನು ಹೊರಡಿಸಲಾಗಿದೆಯೆಂದು ಹಿರಿಯ ಉದ್ಯೋಗಿಗಳು ದೂರುತ್ತಿದ್ದಾರೆ.

ತನ್ನ ಮಾಜಿ ಮುಖ್ಯ ಸಂಪಾದಕ ತರುಣ್ ತೇಜ್‌ಪಾಲ್ ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡು ಹುದ್ದೆ ತೊರೆದಂದಿನಿಂದ ಸಂಕಷ್ಟದಲ್ಲಿದ್ದ ತೆಹಲ್ಕಾಗೆ ಈಗ ಮತ್ತೊಂದು ತೊಂದರೆ ಎದುರಾಗಿದೆ. ಉದ್ಯೋಗಿಗಳು ತಮ್ಮ ಬಾಕಿ ವೇತನ ಆಗ್ರಹಿಸಿ ಹಾಗೂ ತಮ್ಮನ್ನು ರಾಜೀನಾಮೆ ನೀಡುವಂತೆ ಮಾಡಲು ಆಡಳಿತ ಮಂಡಳಿ ನಡೆಸುತ್ತಿರುವ ತಂತ್ರಗಾರಿಕೆಯನ್ನು ವಿರೋಧಿಸಿ ಈಗ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಉದ್ಯೋಗಿಗಳ ಸಂಖ್ಯೆಯನ್ನು ಅರ್ಧಕ್ಕೆ ಕಡಿತಗೊಳಿಸಿ ತೆಹಲ್ಕಾವನ್ನು ಪ್ರಾಕ್ಷಿಕವನ್ನಾಗಿಸಲು ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರದಿಂದ 20ಕ್ಕೂ ಹೆಚ್ಚು ಉದ್ಯೋಗಿಗಳು ದಾರಿ ಕಾಣದಾಗಿದ್ದಾರೆ. ಸಂಪಾದಕೀಯ ಉದ್ಯೋಗಿಗಳು ತಮ್ಮ ಸಮಸ್ಯೆಗಳನ್ನು ವಿವರಿಸಿ ಆಡಳಿತ ಮಂಡಳಿಗೆ ಬರೆದ ಮನವಿ ಪತ್ರಗಳು ಹಾಗೂ ಈಮೇಲ್‌ಗಳು ದಿ ವೈರ್ ಗೆ ಲಭ್ಯವಾಗಿವೆಯೆಂದು ಪತ್ರಿಕೆ ಹೇಳಿಕೊಂಡಿದೆ.

ತೆಹಲ್ಕಾ ಕಚೇರಿಯಲ್ಲಿ 43 ಮಂದಿ ಉದ್ಯೋಗಿಗಳಿದ್ದರೂ ಆಡಳಿತ ಮಂಡಳಿ ಇತ್ತೀಚೆಗೆ 20 ಮಂದಿ ಉದ್ಯೋಗಿಗಳ ಹೆಸರಿರುವ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದು ಈ ಪಟ್ಟಿಯಲ್ಲಿ ಹೆಸರಿರುವ ಉದ್ಯೋಗಿಗಳನ್ನಷ್ಟೇ ನೆಹ್ರೂ ಪ್ಲೇಸ್ ನಲ್ಲಿರುವ ಸಂಸ್ಥೆಯ ಕಚೇರಿಗೆ ಪ್ರವೇಶಿಸಲು ಅನುಮತಿಸಲಾಗಿದೆ. ಉಳಿದ ಉದ್ಯೋಗಿಗಳ ಸೇವೆಯನ್ನು ಅಂತ್ಯಗೊಳಿಸಲಾಗಿಲ್ಲ ಹಾಗೂ ಅವರು ರಾಜೀನಾಮೆಯನ್ನೂ ನೀಡಿಲ್ಲ. ಇದು ತಾವು ರಾಜೀನಾಮೆ ನೀಡುವಂತೆ ಬಲವಂತಪಡಿಸುವ ವಿಧಾನವಲ್ಲದೆ ಬೇರಿನ್ನೇನಲ್ಲವೆಂದು ಹಲವು ಉದ್ಯೋಗಿಗಳು ದೂರಿದ್ದಾರೆ.

ಬಿಜೆಪಿ ವಿರೋಧಿ ಹಾಗೂ ಸರಕಾರ ವಿರೋಧಿ ವರದಿಗಳನ್ನು ಯಾ ಲೇಖನಗಳನ್ನು ತಯಾರಿಸದಂತೆ ತಮಗೆ ತಾಕೀತು ಮಾಡಲಾಗಿದೆಯೆಂದು ಹಲವು ಉದ್ಯೋಗಿಗಳು ಹೇಳಿಕೊಂಡಿದ್ದಾರೆ. ತಮ್ಮಸಮಸ್ಯೆಗೆ ಪರಿಹಾರ ಕಾಣದೆ ಅವರೀಗ ದೆಹಲಿಯ ಕಾರ್ಮಿಕ ಆಯುಕ್ತರಿಗೆ ಪತ್ರ ಬರೆದಿದ್ದು ಈ ಪತ್ರದ ಪ್ರತಿ ಹಾಗೂ ಪತ್ರ ದೊರೆತ ಬಗ್ಗೆ ಕಾರ್ಮಿಕ ಸಚಿವ ಗೋಪಾಲ್ ರೈ ಕಚೇರಿಯಿಂದ ದೊರೆತ ಸ್ವೀಕೃತಿ ಪತ್ರದ ಪ್ರತಿ ತನ್ನಲ್ಲಿದೆಯೆಂದು ದಿ ವೈರ್ ಹೇಳಿಕೊಂಡಿದೆ.


ಪತ್ರಿಕೆಯನ್ನು ಪ್ರಕಟಿಸುವ ಅನಂತ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಹೆಚ್ಚಿನ ಶೇರು ಹೊಂದಿರುವ ಹಾಗೂ ಆಲ್ಕೆಮಿಸ್ಟ್ ಸಮೂಹದ ಅಧ್ಯಕ್ಷ ಕೆ ಡಿ ಸಿಂಗ್ ಅವರನ್ನು ಸಂಪರ್ಕಿಸಲು ದಿ ವೈರ್ ನಡೆಸಿದ ಪ್ರಯತ್ನ ಸಫಲವಾಗಿಲ್ಲ. ತೆಹಲ್ಕಾದ ಪ್ರಕಾಶಕ ಹಾಗೂ ಜನರಲ್ ಮ್ಯಾನೇಜರ್ ಸ್ವಿಂದರ್ ಬಜ್ವಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News