ಭಾರತದೊಂದಿಗ ಮಾತುಕತೆಗೆ ಸಿದ್ಧ: ಪಾಕ್
ಇಸ್ಲಾಮಾಬಾದ್, ಎ. 22: ಮಾತುಕತೆಗೆ ಭಾರತ ಸಿದ್ಧವಾದಾಗ ತಾನೂ ಸಿದ್ಧ ಎಂದು ಪಾಕಿಸ್ತಾನ ಇಂದು ಹೇಳಿದೆ.
‘‘ಈ ಪ್ರಶ್ನೆಯನ್ನು ಪದೇ ಪದೇ ಕೇಳಲಾಗಿದೆ. ಉಭಯ ಬಣಗಳು ಯಾವ ಪದಗಳನ್ನು ಬಳಸಿವೆ ಎಂಬ ಬಗ್ಗೆ ನಾನು ಚರ್ಚೆಗೆ ಇಳಿಯುವುದಿಲ್ಲ’’ ಎಂದು ಪಾಕಿಸ್ತಾನ ವಿದೇಶ ಕಚೇರಿಯ ವಕ್ತಾರ ನಫೀಸ್ ಝಕಾರಿಯ ವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಶಾಂತಿ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದರು.
ಪಾಕಿಸ್ತಾನ ಮತ್ತು ಭಾರತಗಳು ನೆರೆಕರೆಯ ದೇಶಗಳಾಗಿದ್ದು, ಅವುಗಳು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂದು ಇನ್ನೊಂದು ಪ್ರಶ್ನೆಗೆ ಅವರು ಹೇಳಿದರು.
ಪಠಾಣ್‌ಕೋಟ್ ಭಯೋತ್ಪಾದಕ ದಾಳಿ ಕುರಿತ ತನಿಖೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ಭಾರತಕ್ಕೆ ಭೇಟಿ ನೀಡಿದ ಜಂಟಿ ತನಿಖಾ ತಂಡದ ವರದಿಯನ್ನು ಸಂಬಂಧಿಸಿದ ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ. ಒಮ್ಮೆ ತನಿಖೆ ಪೂರ್ಣಗೊಂಡರೆ ಹಾಗೂ ವರದಿ ಸಿದ್ಧಗೊಂಡರೆ, ಹಂಚಿಕೊಳ್ಳಬಹುದಾಗ ಮಾಹಿತಿಯನ್ನು ನಿಮ್ಮೆಂದಿಗೆ ಹಂಚಿಕೊಳ್ಳುತ್ತೇವೆ’’ ಎಂದರು.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಸುದೀರ್ಘ ನಿಲುವನ್ನು, ‘‘ಭಾರತೀಯ ಏಜಂಟ್’’ ಕುಲಭೂಷಣ್ ಯಾದವ್‌ನ ಬಂಧನ ಸಾಬೀತುಪಡಿಸಿದೆ ಎಂದರು.
ಯಾದವ್‌ರ ತಪ್ಪೊಪ್ಪಿಗೆ ಹೇಳಿಕೆಗಳ ಆಧಾರದಲ್ಲಿ ಬಂಧನಗಳನ್ನು ನಡೆಸಲಾಗಿದೆ ಎಂದೂ ಅವರು ಹೇಳಿಕೊಂಡರು. ಆದಾಗ್ಯೂ, ಈ ಬಂಧನಗಳ ವಿವರಗಳನ್ನು ಅವರು ನೀಡಲಿಲ್ಲ.