ದಾರಿತಪ್ಪಿದ ಮುಖ್ಯಮಂತ್ರಿ
ಮಾನ್ಯರೆ,
ಎತ್ತಿನ ಹೊಳೆ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಈ ಯೋಜನೆ ಯಾವ ರೀತಿಯಲ್ಲೂ ವಿಫಲವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಈ ಹೇಳಿಕೆಯನ್ನು ನೀಡುವ ಹೊತ್ತಿಗೆ, ಕರಾವಳಿ ತೀವ್ರ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ನೇತ್ರಾವತಿಯಲ್ಲಿ ನೀರು ತೀವ್ರ ಇಳಿಕೆಯಾಗಿರುವುದರಿಂದ ಎರಡು ದಿನಕ್ಕೊಮ್ಮೆ ನೀರು ಬಿಡುವುದಕ್ಕಾಗಿ ಸಚಿವ ರಮಾನಾಥ ರೈ ಅವರು ಹೇಳಿದ್ದಾರೆ. ಈಗಲೇ ಕರಾವಳಿಯ ಪರಿಸ್ಥಿತಿ ಹೀಗಾದರೆ, ಮುಂದೆ ಎತ್ತಿನಹೊಳೆ ಯೋಜನೆ ಜಾರಿಯಾದರೆ ನವೆಂಬರ್ ತಿಂಗಳಲ್ಲೇ ಕರಾವಳಿ ಕುಡಿಯುವ ನೀರಿನ ಬರವನ್ನು ಎದುರಿಸಬೇಕಾಗುತ್ತದೆ.
ಎತ್ತಿನ ಹೊಳೆಯ ಉದ್ದೇಶ ನೆರೆ ನೀರನ್ನು ಸಂಗ್ರಹಿಸುವುದು ಎಂದು ಮುಖ್ಯಮಂತ್ರಿಯವರು ಹೆಗಲು ಜಾರಿಸಬಹುದು. ಆದರೆ, ನೇತ್ರಾವತಿ ನೆರೆಯಿಂದ ತುಂಬುವುದೇ ಇತ್ತೀಚೆಗೆ ಅಪರೂಪವಾಗಿ ಬಿಟ್ಟಿದೆ. ಹೊರ ಹರಿವನ್ನೆಲ್ಲ ಎತ್ತಿನ ಹೊಳೆ ಯೋಜನೆ ಹೀರಿ ತೆಗೆದರೆ, ನೇತ್ರಾವತಿ ಅವಧಿಗೆ ಮುಂಚೆಯೇ ಬತ್ತುವುದರಲ್ಲಿ ಅನುಮಾನವಿಲ್ಲ. ನೇತ್ರಾವತಿಯ ಒಟ್ಟು ಸ್ವರೂಪದಲ್ಲಿ ನೆರೆ ನೀರು ಕೂಡ ತನ್ನ ಪರಿಣಾಮವನ್ನು ಬೀರುತ್ತದೆ. ನೆರೆ ನೀರನ್ನಷ್ಟೇ ಆಯ್ದು ಉಳಿದದ್ದನ್ನು ಹಾಗೆಯೇ ಬಿಟ್ಟು ಬಿಡುತ್ತೇವೆ ಎನ್ನುವುದು ಹಾಸ್ಯಾಸ್ಪದ. ಬಯಲು ಸೀಮೆಗೆ ನೀರು ನೀಡುವುದರಲ್ಲಿ ಯಾವ ಅಭ್ಯಂತರವೂ ಇಲ್ಲ. ಆದರೆ ಒಬ್ಬರ ನೀರನ್ನು ಕಸಿದುಕೊಂಡು, ಇನ್ನೊಬ್ಬರಿಗೆ ಕೊಟ್ಟರೆ ಅದರಿಂದ ಆಗುವ ಬದಲಾವಣೆ ಏನು?
ಒಟ್ಟಿನಲ್ಲಿ ಕೆಲವು ಖಾಸಗಿ ಕಂಪೆನಿಗಳು, ಅಧಿಕಾರಿಗಳು ಮತ್ತು ಸಮಯ ಸಾಧಕ ರಾಜಕಾರಣಿಗಳು ಜೊತೆ ಸೇರಿ ಮುಖ್ಯಮಂತ್ರಿಯನ್ನು ದಾರಿ ತಪ್ಪಿಸಿದ್ದಾರೆ. ಆದರೆ ಅವರು ದಾರಿ ತಪ್ಪಿಸಿರುವುದು ಕೇವಲ ಮುಖ್ಯಮಂತ್ರಿಯನ್ನಷ್ಟೇ ಅಲ್ಲ, ನೇತ್ರಾವತಿ ನದಿಯನ್ನು ಆಶ್ರಯಿಸಿರುವ ಪ್ರಾಣಿ, ಪಕ್ಷಿ, ಮನುಷ್ಯರ ಬದುಕನ್ನೇ ದಿಕ್ಕು ತಪ್ಪಿಸಲು ಹೊರಟಿದ್ದಾರೆ.
ರವಿ ನೇರಂಕಿ, ಬೆಳ್ತಂಗಡಿ