ಹರ್ಯಾಣ: ಕಾಂಗ್ರೆಸ್ ನಾಯಕ ಕಾಕಾರ ಹತ್ಯೆ!
ರೋಹ್ಟಕ್, ಎಪ್ರಿಲ್ 23: ಹರಿಯಾಣದ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಕಾಕ ಅಜ್ಞಾತ ವ್ಯಕ್ತಿಗಳ ಗುಂಡಿನ ದಾಳಿಗೀಡಾಗಿ ಮೃತರಾಗಿದ್ದಾರೆಂದು ವರದಿಯಾಗಿದೆ. ನಗರದಲ್ಲಿ ಶುಕ್ರವಾರ ಬೆಳಗ್ಗೆ 6:30ಕ್ಕೆ ಡಬ್ಲ್ ಪಾರ್ಕ್‌ನ ಬಳಿ ಬೆಳಗ್ಗಿನ ವಾಕಿಂಗ್ ವೇಳೆ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದರು.
ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಹುದಿನಗಳಿಂದ ಚಾಲ್ತಿಯಲ್ಲಿರುವ ಸೊತ್ತು ವಿವಾದ ಕೊಲೆಪಾತಕಕ್ಕೆ ಕಾರಣವಾಗಿರಬಹುದೆಂದು ಪೊಲೀಸರು ಸದ್ಯ ಊಹಿಸಿದ್ದಾರೆ. ಜ್ಯುವೆಲರ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷರಾಗಿದ್ದ ಅಶೋಕ್ ಕಾಕ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾರ ಅತಿ ನಿಕಟವರ್ತಿಯಾಗಿದ್ದರು. ರಾಜ್ಯದ ಕೋಅಪರೇಟಿವ್ ಆ್ಯಂಡ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಇದರ ಮುಖ್ಯಸ್ಥರಾಗಿದ್ದ ಅವರಿಗೆ ಅರುವತ್ತೆಂಟು ವರ್ಷ ಪ್ರಾಯವಾಗಿತ್ತು.
ಚಿನ್ನಾಭರಣ ವ್ಯಾಪಾರ ಕ್ಷೇತ್ರದಲ್ಲಿ 2ಲಕ್ಷ ರೂಪಾಯಿಗೂ ಹೆಚ್ಚಿನ ವ್ಯವಹಾರಕ್ಕೆ ಪಾನ್ ಕಾರ್ಡ್ ಕೇಂದ್ರಸರಕಾರ ಕಡ್ಡಾಯಗೊಳಿಸಿರುವುದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕಾಕಾ ಮುಂಚೂಣಿಯಲ್ಲಿದ್ದರೆಂದು ವರದಿಗಳು ತಿಳಿಸಿವೆ.