ಫಾ. ಜಯಪಾಲ್ ರಿಗೆ ಮತ್ತೆ ಪಾದ್ರಿ ಸ್ಥಾನ ನೀಡುವುದು ಭಾರತದ ಮಕ್ಕಳಿಗೆ ಅಪಾಯ
ಮಿನ್ನೆಸೋಟಾ, ಎ. 23: ಅಮೇರಿಕನ್ ಪ್ರಜೆಯೊಬ್ಬಳು ಅಪ್ರಾಪ್ತೆಯಾಗಿದ್ದಾಗ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿ ಮಿನ್ನೆಸೋಟಾ ನ್ಯಾಯಾಲಯದಿಂದ ಜೈಲು ಶಿಕ್ಷೆಗೊಳಗಾಗಿ ಮತ್ತೆ ಭಾರತಕ್ಕೆ ಗಡೀಪಾರು ಮಾಡಲ್ಪಟ್ಟ ಚರ್ಚ್ ಪಾದ್ರಿ ಜೋಸೆಫ್ ಜೆಯಪಾಲ್ ರನ್ನು ವ್ಯಾಟಿಕನ್ ಈ ವರ್ಷದ ಫೆಬ್ರವರಿಯಲ್ಲಿ ಊಟಿ ಡಯೋಸೀಸ್ ನ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿರುವುದು ವಿವಾದಕ್ಕೆಡೆ ಮಾಡಿಕೊಟ್ಟಿದೆ.
ದಿ ನ್ಯೂಸ್ ಮಿನಿಟ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮೇಗನ್ ಪೀಟರ್ಸನ್, ಜೆಯಪಾಲ್ ರನ್ನು ಮತ್ತೆ ಅಧಿಕಾರಯುತ ಸ್ಥಾನಕ್ಕೆ ನೇಮಿಸಿರುವುದು ತನ್ನ ಹಾಗೂ ತನ್ನಂತೆಯೇ ಧಾರ್ಮಿಕ ಗುರುಗಳಿಂದ ಲೈಂಗಿಕ ಕಿರುಕುಳಕ್ಕೊಳಗಾದ ಇತರರ ಕೆನ್ನೆಗೆ ಹೊಡೆದಂತಾಗಿದೆ ಎಂದು ಹೇಳಿದ್ದಾರಲ್ಲದೆ ಇಂತಹ ಒಂದು ಕ್ರಮ ಭಾರತದ ಮಕ್ಕಳಿಗೆ ಅಪಾಯ ತಂದೊಡ್ಡಬಲ್ಲದು ಎಂದೂ ಭಯಪಟ್ಟಿದ್ದಾರೆ. ‘‘ನನಗಾದ ತೊಂದರೆಯು ಬೇರೆ ಯಾವ ಮಕ್ಕಳಿಗೂ ಬಾರದಿರಲಿ,’’ಎಂದೂ ಹೇಳಿದ್ದಾರೆ.
ಜೆಯಪಾಲ್ ರನ್ನು ನೇಮಿಸುವ ನಿರ್ಧಾರ ಕೈಗೊಂಡ ಬಿಷಪ್ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕೆಂದೂ ಅವರು ಆಗ್ರಹಿಸಿದ್ದಾರೆ.
ತನ್ನ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವಂತಾಗಲು ತಾನು ಬಹಳಷ್ಟು ಹೆಣಗಾಡಿದ್ದೇನೆಂದು ಹೇಳಿದ ಪೀಟರ್ಸನ್ ಮಿನ್ನೆಸೋಟಾದ ಚರ್ಚ್ ಅಧಿಕಾರಿಗಳು ತನ್ನ ಸಹಾಯಕ್ಕೆ ಬಂದಿರಲಿಲ್ಲವೆಂದು ದೂರಿದರು.
‘‘ಜೆಯಪಾಲ್ ನಂತವರು ಬಹಳ ಆತ್ಮೀಯವಗಿ ಮಾತನಾಡಿ ತಮ್ಮ ಕಾರ್ಯ ಸಾಧಿಸುತ್ತಾರೆ. ಅವರೊಡನೆ ಕೆಲಸ ಮಾಡುವವರು ತಮ್ಮ ಸುಖ ಸಂತೋಷಗಳ ಬಗೆಗೇ ಹೆಚ್ಚು ಚಿಂತಿತರಾಗಿದ್ದಾರೆ ಹಾಗೂ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿರ್ಲಕ್ಷಿಸುತ್ತಾರೆ ಅಥವಾ ಅಡಗಿಸುವ ಯತ್ನ ಮಾಡುತ್ತಾರೆ. ಇಂತಹ ಮನೊಭಾವದಿಂದಲೇ ಮಕ್ಕಳು ಹೆಚ್ಚೆಚ್ಚು ಅಪಾಯಕ್ಕೊಳಗಾಗುತ್ತಾರೆ,’’ ಎಂದೂ ಪೀಟರ್ಸನ್ ತಿಳಿಸಿದರು.
ಜೆಯಪಾಲ್ ರನ್ನು ಮತ್ತೆ ನೇಮಿಸಿರುವುದು ತನ್ನ ಮೇಲೆ ಮತ್ತೊಮ್ಮೆ ದೌರ್ಜನ್ಯ ನಡೆಸಿದಂತಹ ಅನುಭವವಾಗಿದೆ, ಎಂದು ಪೀಟರ್ಸನ್ ದಿ ನ್ಯೂಸ್ ಮಿನಿಟ್ ನೊಂದಿಗೆ ಮಾತನಾಡುತ್ತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.