ಎಲ್ಲಾ ಆಯ್ತು, ಈಗ ಮಗುವಿಗೆ ಹೆಸರಿಡುವ ತಜ್ಞರು!
ವಾಷಿಂಗ್ಟನ್, ಎ. 24: ಮಗುವಿಗೆ ಒಂದು ಹೆಸರಿಟ್ಟರೆ ಅದು ಜೀವನ ಪರ್ಯಂತ ಇರುವಂಥದ್ದು. ಇದು ಸಹಜವಾಗಿಯೇ ನವಜಾತ ಶಿಶುವಿನ ಪೋಷಕರು, ಹೆಸರು ತಜ್ಞರ ಬಳಿಕ ಧಾವಿಸುವಂತೆ ಮಾಡಿದೆ.
ನೀವು ಎಂಥ ತಜ್ಞರನ್ನು ಸಂಪರ್ಕಿಸುತ್ತೀರೊ ಅದಕ್ಕೆ ತಕ್ಕಂತೆ, ವೃತ್ತಿಯಶಸ್ಸಿನ ಮಾನದಂಡದಿಂದ ಹಿಡಿದು, ಆಧ್ಯಾತ್ಮಿಕ ಹೆಸರುಗಳ ವರೆಗೆ ಎಲ್ಲ ಅಂಶಗಳ ಬಗ್ಗೆಯೂ ತಜ್ಞರು ಸಲಹೆ ನೀಡುತ್ತಾರೆ.
"ದ ಬೇಬಿ ನೇಮ್ ರಿಪೋರ್ಟ್ ಕಾರ್ಡ್‌ನಲ್ಲಿ ಮಗುವಿನ ಹೆಸರಿನ ಪ್ರಯೋಜನ ಮತ್ತು ಹಾನಿಯ ಬಗ್ಗೆ ಮೆಹ್ರಾಬಿಯನ್ ವಿವರಿಸಿದ್ದಾರೆ.
ಮಗುವಿನ ಹೆಸರನ್ನು ಜನಾಂಗೀಯ ಆರೈಕೆ, ಜನಪ್ರಿಯ ಮೋಜು, ಯಶಸ್ಸು ಹಾಗೂ ಗಂಡು ಅಥವಾ ಹೆಣ್ಣು ಎಂಬ ನಾಲ್ಕು ಮಾನದಂಡಗಳ ಆಧಾರದಲ್ಲಿ ಅವರು ಮೌಲ್ಯಮಾಪನ ಮಾಡುತ್ತಾರೆ.
ಅಮೆರಿಕ ಹಾಗೂ ಯೂರೋಪ್‌ನಲ್ಲಿ ತಮ್ಮ ಮಕ್ಕಳಿಗೆ ಹೆಸರಿಡುವ ಸಂಬಂಧ ಪೋಷಕರಿಗೆ ನೆರವಾಗುವ ತಜ್ಞರು ಇದಕ್ಕೆ ದುಬಾರಿ ಶುಲ್ಕವನ್ನೂ ವಿಧಿಸುತ್ತಿದ್ದಾರೆ. ಸ್ವಿಡ್ಜರ್‌ಲೆಂಡ್‌ನಲ್ಲಿ ಎರ್ಫಾಗ್‌ಸ್ವೆಲ್ಲೆ ಹೆಸರಿನ ಏಜೆನ್ಸಿ ನಡೆಸುತ್ತಿರುವ ಮಾರ್ಕ್ ಹೌಸೆರ್ ಹೇಳುವಂತೆ, ಮಗುವಿನ ಹೆಸರಿಗೆ 29 ಸಾವಿರ ಡಾಲರ್ ವರೆಗೂ ಶುಲ್ಕ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸುಮಾರು 2 ರಿಂದ ಮೂರು ವಾರಗಳ ಸಿದ್ಧತೆ ಬೇಕಾಗುತ್ತದೆ. ಇದಕ್ಕೆ ಇತಿಹಾಸ ತಜ್ಞರ ನೆರವನ್ನೂ ಪಡೆಯಬೇಕಾಗುತ್ತದೆ.
ನ್ಯೂಯಾರ್ಕ್‌ನಲ್ಲಿ "ಮೈ ನೇಮ್ ಫಾರ್ ಲೈಫ್ ಇನ್ ನ್ಯೂಯಾರ್ಕ್" ಎಂಬ ಸಂಸ್ಥೆ ನಡೆಸುತ್ತಿರುವ ಶೆರ್ರಿ ಸುಸಾನೆ ಹೇಳುವಂತೆ ಈ ಸೇವೆಗೆ ಕೆಲ ನೂರು ಡಾಲರ್‌ಗಳನ್ನು ವಿಧಿಸಲಾಗುತ್ತದೆ. ಒಂದು ಹೆಸರಿಗೆ ಸುಮಾರು 30 ಗಂಟೆ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಹೆಸರಿನ ಜನಪ್ರಿಯತೆಯಂಥ ಕೆಲ ಮಾನದಂಡಗಳನ್ನು ವಸ್ತುನಿಷ್ಠವಾಗಿ ಅಳೆಯಬೇಕಾಗುತ್ತದೆ. ಒಂದು ನಿರ್ದಿಷ್ಟ ಹೆಸರಿನ ಜನರ ಸಾವಿನ ಪ್ರಮಾಣ, ಯಶಸ್ಸಿನ ಸಾಧ್ಯತೆ ಮತ್ತಿತರ ಅಂಶಗಳನ್ನು ಕೂಡಾ ಪರಿಗಣಿಸಬೇಕಾಗುತ್ತದೆ ಎಂದು ಆಕೆ ವಿವರಿಸುತ್ತಾರೆ.
ನಿರ್ದಿಷ್ಟ ಕುಟುಂಬಕ್ಕೆ ಆ ಹೆಸರು ಯೋಗ್ಯವಾಗುತ್ತದೆಯೇ ಎಂಬ ಬಗ್ಗೆ ಸಾಂಸ್ಕೃತಿಕ ತಜ್ಞರ ಜತೆಗೂ ಅವರು ಚರ್ಚಿಸುತ್ತಾರೆ.