ಪಠಾಣಕೋಟ್:ಲೆ.ಕ.ನಿರಂಜನ,ಎನ್‌ಎಸ್‌ಜಿ ಶ್ವಾನಕ್ಕೆ ಶೌರ್ಯ ಪ್ರಶಸ್ತಿ ನೀಡಲು ಶಿಫಾರಸು
ಹೊಸದಿಲ್ಲಿ,ಎ.24: ಈ ವರ್ಷದ ಆರಂಭದಲ್ಲಿ ಪಠಾನಕೋಟ್ ವಾಯುನೆಲೆಯ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕರ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹುತಾತ್ಮ ಅಧಿಕಾರಿ ಲೆ.ಕ.ನಿರಂಜನ ಇ.ಕೆ.ಮತ್ತು ಇನ್ನಿಬ್ಬರ ಜೊತೆಗೆ ತನ್ನ ಶ್ವಾನ ‘ರಾಕೆಟ್’ಹೆಸರನ್ನೂ ಮಿಲಿಟರಿ ಶೌರ್ಯ ಪ್ರಶಸ್ತಿಗಳಿಗಾಗಿ ಎನ್‌ಎಸ್‌ಜಿ ಶಿಫಾರಸು ಮಾಡಿದೆ. ಶ್ವಾನವೊಂದರ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಿರುವುದು ಬಹುಶಃ ಇದೇ ಮೊದಲ ಬಾರಿಯಾಗಿದೆ.
ವಿಶೇಷ ತರಬೇತಿ ಪಡೆದಿರುವ ಎರಡೂವರೆ ವರ್ಷ ಪ್ರಾಯದ ಬೆಲ್ಜಿಯನ್ ಮಲಿನೋಯಿಸ್ ಜಾತಿಯ ಶ್ವಾನ ರಾಕೆಟ್ ಮತ್ತು ಅದರ ನಿರ್ವಾಹಕನ ಹೆಸರುಗಳನ್ನು ‘ಸೇನಾ ಪದಕ ’ಕ್ಕೆ ಮತ್ತು ನಿರಂಜನ ಹಾಗೂ ಇತರ ಇಬ್ಬರು ಕಮಾಂಡರ್‌ಗಳ ಹೆಸರುಗಳನ್ನು ‘ಶೌರ್ಯ ಚಕ್ರ’ಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಗ್ರೆನೇಡ್‌ನು ಕಟ್ಟಿಕೊಂಡಿದ್ದ ಹತ ಭಯೋತ್ಪಾದಕನ ದೇಹದಿಂದ ಅದನ್ನು ಪ್ರತ್ಯೇಕಗೊಳಿಸುತ್ತಿದ್ದಾಗ ಅದು ಸಿಡಿದು ಬಾಂಬ್ ನಿಷ್ಕ್ರಿಯ ದಳದ ಕಮಾಂಡಿಂಗ್ ಆಫೀಸರ್ ನಿರಂಜನ ಸಾವನ್ನಪ್ಪಿದ್ದರು.
ತನ್ನ ನಿರ್ವಾಹಕನ ಆದೇಶದ ಮೇರೆಗೆ ಬೆಂಕಿಯಲ್ಲಿ ಉರಿಯುತ್ತಿದ್ದ ಏರ್‌ಮನ್ ಬ್ಯಾರಕ್‌ನ್ನು ಪ್ರವೇಶಿಸಿದ್ದ ರಾಕೆಟ್ ಒಳಗಡೆ ಉಗ್ರರು ಬಚ್ಚಿಟ್ಟುಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಅವರ ಚೀಲವೊಂದನ್ನು ಹೊತ್ತುಕೊಂಡು ಬಂದಿತ್ತು. ಬೆಂಕಿಯಲ್ಲಿ ತನ್ನ ಕಾಲುಗಳು ಸುಟ್ಟುಹೋಗಿದ್ದರೂ ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ಅದು ಹಿಂದೆ ಬಿದ್ದಿರಲಿಲ್ಲ.
ಸೇನೆಯ ಶ್ವಾನಗಳಿಗೆ ಮಿಲಿಟರಿ ಪದಕಗಳೊಂದಿಗೆ ಗೌರವಿಸಿರುವ ಕೆಲವೇ ನಿದರ್ಶನಗಳಿವೆಯಾದರೂ ಎನ್‌ಎಸ್‌ಜಿ ಮಟ್ಟಿಗೆ ಇದೇ ಮೊದಲನೆಯದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.