ಬಾಟಲಿ ನೀರಲ್ಲಿ ಕ್ಯಾನ್ಸರ್ ತರುವ ಕಾರ್ಸಿನೊಜಿನ್ ?
ಹೊಸದಿಲ್ಲಿ, ಎ. 25: ಕ್ಯಾನ್ಸರ್‌ಕಾರಕ ಕಾರ್ಸಿನೋಜಿನ್ ಅಂಶ ಬಾಟಲಿ ನೀರಿನ ಉಪ ಉತ್ಪನ್ನದಲ್ಲಿ ಇರುವುದನ್ನು ಕಳೆದ ವರ್ಷ ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರ (ಬಿಎಆರ್‌ಸಿ) ಪತ್ತೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್, ಈ ತಿಂಗಳ 30ರಂದು ದೇಶಾದ್ಯಂತ ಎಲ್ಲ ಬಾಟಲಿ ನೀರಿನ ಮಾದರಿಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಗುರಿಪಡಿಸುವಂತೆ ಸೂಚಿಸಿದೆ.
ಈ ಮೊದಲು ಬಿಐಎಸ್, ಇತರ ಕ್ಯಾನ್ಸರ್ ಕಾರಕ ಅಂಶಗಳಾದ ಪಾಲ್ಯರೋಮ್ಯಾಟಿಕ್ ಹೈಡ್ರೊಕಾರ್ಬನ್ (ಪಿಎಎಚ್), ಪಾಲಿ ಕ್ಲೋರಿನೇಟೆಡ್ ಬಿಪೆಬಲ್ಸ್ (ಪಿಸಿಬಿ) ಹಾಗೂ ಕೀಟನಾಶಕಗಳು, ಬ್ರೊಮೇಟ್‌ಗಳ ಪರೀಕ್ಷೆಯನ್ನು ಕಡ್ಡಾಯಗೊಳಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿತ್ತು.
ಬಿಎಆರ್‌ಸಿ ತಂಡ ವಿವಿಧ ಕಂಪೆನಿಗಳ 90 ನೀರಿನ ಮಾದರಿಗಳನ್ನು ನಡೆಸಿದ್ದು, ಕಳೆದ ವರ್ಷದ ಜನವರಿಯಲ್ಲಿ ಈ ಬಗೆಗಿನ ವರದಿಯನ್ನು ಬಿಡುಗಡೆ ಮಾಡಿತ್ತು. ಶೇಕಡ 27ರಷ್ಟು ಮಾದರಿಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಬ್ರೊಮೇಟ್ ಅಂಶ ಅಧಿಕ ಇರುವುದನ್ನು ವರದಿಯಲ್ಲಿ ವಿವರಿಸಲಾಗಿತ್ತು.
ಈ ಅಂಶಗಳ ಹಿನ್ನೆಲೆಯಲ್ಲಿ ಬಿಐಎಸ್ ಕಳೆದ ಜುಲೈನಲ್ಲಿ ಪರೀಕ್ಷಾ ನೀತಿಗೆ ತಿದ್ದುಪಡಿ ತಂದಿತ್ತಾದರೂ ಅದು ಸ್ಪಷ್ಟವಾಗಿರಲಿಲ್ಲ. ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಾಂತ್ ತೊಂಗದ್ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಉತ್ತರ ನೀಡಿ, ಬಿಐಎಸ್ ನಿಯಮಾವಳಿಗೆ ತಿದ್ದುಪಡಿ ತರಲಾಗಿದುದ, ಏಪ್ರಿಲ್ 30ರಿಂದ ಇದು ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿತ್ತು.