ಕನ್ಹಯ್ಯಾ ಮೇಲೆ ದೇಶದ್ರೋಹದ ಆರೋಪ ಹೊರಿಸಿದ್ದು ತಪ್ಪು, ಯುವ ಬೆಂಬಲ ಕಳೆದುಕೊಳ್ಳಲಿದೆ ಬಿಜೆಪಿ : ಶಿವಸೇನೆ

Update: 2016-04-25 03:25 GMT

ನಾಶಿಕ್, ಎ. 25: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಮೇಲೆ ದೇಶದ್ರೋಹದ ಆರೋಪ ಹೊರಿಸಿರುವ ಬಿಜೆಪಿ ಕ್ರಮ ಸರಿಯಲ್ಲ ಎಂದು ಬಿಜೆಪಿ ಮಿತ್ರಪಕ್ಷ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, "ಕನ್ಹಯ್ಯಾ ಕುಮಾರ್‌ಗೆ ಜನ್ಮ ನೀಡಿದವರು ಯಾರು ಎನ್ನುವುದನ್ನು ಸರ್ಕಾರ ಮೊದಲು ನೋಡಬೇಕು. ಆತನನ್ನು ದೇಶದ್ರೋಹಿ ಎಂದು ಬಿಂಬಿಸಿರುವುದು ತಪ್ಪು. ಯುವಕರಿಗೆ ಈ ರೀತಿ ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಿದರೆ, ಅವರು ದೇಶಕ್ಕಾಗಿ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಬೆಂಬಲವನ್ನು ಬಿಜೆಪಿ ಕಳೆದುಕೊಳ್ಳಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.

ಯುವಕರು ನಮ್ಮ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಕೇಂದ್ರ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮುಂಬೈ-ಪುಣೆ ವಿಮಾನದಲ್ಲಿ ಸಹಪ್ರಯಾಣಿಕರೊಬ್ಬರು ನನ್ನ ಕತ್ತುಹಿಸುಕಲು ಪ್ರಯತ್ನಿಸಿದರು ಎಂದು ಕನ್ಹಯ್ಯಾ ಕುಮಾರ್ ಹೇಳಿಕೆ ನೀಡಿರುವ ಬೆನ್ನಲ್ಲೇ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ಆ ವ್ಯಕ್ತಿಯನ್ನು ಕೊಲ್ಕತ್ತಾದ ಡಿಜೆ ಮನಸ್ ಎಂದು ಗುರುತಿಸಲಾಗಿದೆ.

ಜಂಟಿ ಪೊಲೀಸ್ ಆಯುಕ್ತ ದೇವನ್ ಭಾರತಿ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಘಟನೆಯಲ್ಲಿ ನೂಕಾಟ, ತಳ್ಳಾಟ ನಡೆದಿದ್ದು, ಎಂಟು ಮಂದಿ ಇದ್ದರು. ಕನ್ಹಯ್ಯಾ ಇದನ್ನು ವೈಭವೀಕರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News