ಇನ್ನು ಥಿಯೇಟರ್ ನಲ್ಲಿ ಸಿನೆಮಾಕ್ಕೆ ಮೊದಲು ಇನ್ನೊಂದು ಕಡ್ಡಾಯ ಸಿನೆಮಾ !
ಹೊಸದಿಲ್ಲಿ, ಎ. 25: ಇನ್ನು ಮುಂದೆ ಥಿಯೇಟರ್ ನಲ್ಲಿ ನಿಮ್ಮ ನೆಚ್ಚಿನ ಸಿನೆಮಾ ವೀಕ್ಷಿಸುವ ಮೊದಲು ನೀವು ಇನ್ನೊಂದು ಸಿನಿಮಾವನ್ನು ಕಡ್ಡಾಯವಾಗಿ ನೋಡಬೇಕಾಗಬಹುದು. ಅದುವೇ ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ಪ್ರತಿಬಿಂಬಿಸುವ ಸಿನೆಮಾ. ಅಂತೆಯೇ ಎಲ್ಲಾ ಕೇಂದ್ರ ಸರಕಾರಿ ಯೋಜನೆಗಳ ಹೆಸರುಗಳು ‘ಪ್ರಧಾನ ಮಂತ್ರಿ’ ಅಥವಾ ರಾಷ್ಟ್ರೀಯವಾದಿ ನಾಯಕರ ಹೆಸರುಗಳಿಂದ ಆರಂಭವಾಗಬಹುದು.
ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೆಚ್ಚು ಪ್ರಚಾರ ಪಡಿಸಲು ಕೇಂದ್ರ ಸಚಿವರ ತಂಡವೊಂದು ನೀಡಿರುವ ಹಲವಾರು ಸಲಹೆಗಳಲ್ಲಿ ್ ಮೇಲಿನ ಎರಡು ಸಲಹೆಗಳೂ ಸೇರಿವೆ.
ಅಂತೆಯೇ ಈ ಸಚಿವರ ಗುಂಪು ಇತ್ತೀಚೆಗೆ ಸಂಸದೀಯ ವ್ಯವಹಾರಗಳ ಸಚಿವ ಎಂ ವೆಂಕಯ್ಯ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದು ಆ ಸಭೆಯಲ್ಲಿ ಸರಕಾರದ ಸಾಧನೆಗಳನ್ನು ಎನಿಮೇಶನ್ ಮೂಲಕವೂ ಪ್ರಚಾರ ಪಡಿಸಲು ಶಿಫಾರಸು ಮಾಡಲಾಗಿದ್ದು ಈ ಅನಿಮೇಶನ್ ಚಿತ್ರಗಳು ‘ಹಿಂದೆ ಹಾಗೂ ಈಗಿರುವ’ ವ್ಯತ್ಯಾಸಗಳನ್ನು ಹಾಸ್ಯಭರಿತವಾಗಿ ಪ್ರಸ್ತುತ ಪಡಿಸಲಿವೆ.
ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸರಕಾರವು ವಾರ್ತಾ ಮತ್ತು ಪ್ರಸಾರ ಸಚಿವಾಲಯವನ್ನು ಕೋರಬಹುದು. ಪ್ರತಿ ಎರಡು ವಾರಗಳಿಗೊಮ್ಮೆ ಸರಕಾರದ ಯೋಜನೆಗಳ ಬಗ್ಗೆ ಹೊಸ ಚಿತ್ರ ನಿರ್ಮಿಸಿ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಲಾಗುವುದು ಎಂದು ತಿಳಿದು ಬಂದಿದೆ.
ಹಲವಾರು ಬಾರಿ ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಸರಕಾರಗಳು ತಮ್ಮ ಯೋಜನೆಗಳೆಂದು ಬಿಂಬಿಸುವುದನ್ನು ಮನಗಂಡು ಎಲ್ಲಾ ಕೇಂದ್ರ ಯೋಜನೆಗಳ ಉದ್ಘಾಟನೆ ವೇಳೆ ಸಂಬಂಧಪಟ್ಟ ಸಂಸದರು ಹಾಗೂ ಕೇಂದ್ರ ಸಚಿವರುಗಳು ಉಪಸ್ಥಿತರಿರಬೇಕೆಂದು ಸಚಿವರ ತಂಡ ಹೇಳಿದೆ.