ಉತ್ತರಪ್ರದೇಶ: ಸತ್ತವಳು ಎದ್ದು ಮತ್ತೆ ಸತ್ತಳು, ಜನರು ಪವಾಡ ಎಂದು ನಂಬಿದ್ದಾರೆ!
ಬಹರಾಯಿಚ್, ಎಪ್ರಿಲ್ 25: ಮೃತಳಾಗಿ ನಾಲ್ಕು ಗಂಟೆ ನಂತರ ಯುವತಿ ಜೀವಂತವಾಗಿದ್ದಾಳೆ. ಇದು ತುಂಬಾ ಆಶ್ಚರ್ಯವನ್ನು ನೀಡುವ ಪ್ರಕರಣವೇ. ಆದರೆ ಹೀಗೊಂದು ಘಟನೆ ಬಹರಾಯಿಚ್‌ನ ಬೌಂಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆಯೆಂದು ವರದಿಯಾಗಿದೆ. ಶನಿವಾರ ಬೆಳಗ್ಗೆ ಪೊಲೀಯೊ ಪೀಡಿತ 22ವರ್ಷದ ಯುವತಿ ರೇಶ್ಮಾ ಮೃತಳಾದಳು. ಸಂಬಂಧಿಕರು ಅಳುತ್ತಾ ಅವಳಮನೆಗೆ ಬಂದರು. ಮನೆಯ ವಾತಾವರಣ ಅಲ್ಲೋಲಕಲ್ಲೋಲವಾಗಿತ್ತು. ಗ್ರಾಮದ ಜನರು ಮೃತಳ ಮನೆಯವರನ್ನು ಸಂತೈಸುತ್ತಿದ್ದರು. ಮೃತದೇಹವನ್ನು ದಫನಕಾರ್ಯ ಮಾಡುವ ಮೊದಲು ಸ್ನಾನ ಮಾಡಿಸಲಾಗುತ್ತಿತ್ತು.ಆಗ ರೇಶ್ಮಾಳ ಉಸಿರಾಟ ಆರಂಭವಾಯಿತು. ಮನೆಯವರು ಅವಳನ್ನು ಖಬರಸ್ಥಾನದಲ್ಲಿ ದಫನಮಾಡಲು ಹೊರಟಿರುವಾಗಲೇ ರೇಶ್ಮಾ ಜೀವಂತ ಎದ್ದು ಬಿಟ್ಟಿದ್ದಳು. ಖುಶಿಯ ಜೊತೆಗೆ ಆಶ್ಚರ್ಯ ಅವರಿಗಾಗಿತ್ತು ಎಂದು ವರದಿಗಳು ತಿಳಿಸಿವೆ.
ರೇಶ್ಮಾಳ ಉಸಿರಾಟ ಆರಂಭವಾದ್ದರಿಂದ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಶನಿವಾರ ರಾತ್ರೆ ಅವಳು ಮತ್ತೆಮೃತಳಾದಳು. ಅವಳು ಮೃತಪಟ್ಟು ಬದುಕಿ ಮತ್ತೆ ಸತ್ತ ಘಟನೆಯನ್ನು ಗ್ರಾಮ ನಿವಾಸಿಗಳು ಪವಾಡ ವೆಂದು ಹೇಳತೊಡಗಿದ್ದಾರೆ. ವಾಸ್ತವದಲ್ಲಿ ರೇಶ್ಮಾಳ ಆರೋಗ್ಯಸ್ಥಿತಿ ಆರು ತಿಂಗಳ ಮೊದಲು ಬಿಗಡಾಯಿಸಿತ್ತು. ಅವಳನ್ನು ಲಕ್ನೊದ ಒಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಶನಿವಾರ ಬೆಳಗ್ಗೆ ಅವಳನ್ನು ಡಿಸ್ಚಾರ್ಜ್ ಮಾಡಿದ್ದರು. ರೇಶ್ಮಾಳನ್ನು ನೋಡಲು ಜನರು ಹೋದಾಗ ಅವಳು ಮತ್ತೆ ಮೃತಳಾಗಿದ್ದನ್ನು ಅವರು ನೋಡಬೇಕಾಯಿತು ಎಂದು ವರದಿಗಳು ತಿಳಿಸಿವೆ.