×
Ad

ಪಾಕ್: ಸಿಹಿ ತಿಂಡಿ ತಿಂದು 23 ಸಾವು

Update: 2016-04-25 16:50 IST

ಇಸ್ಲಾಮಾಬಾದ್, ಎ. 25: ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ಸಿಹಿ ತಿಂಡಿ ತಿಂದ ಬಳಿಕ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಹಾಗೂ ಹತ್ತಾರು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ಸಿಹಿತಿಂಡಿಗಳಲ್ಲಿ ಕೀಟನಾಶಕ ಬೆರೆತಿತ್ತು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

ಪಂಜಾಬ್ ರಾಜ್ಯದ ಕರೋರ್ ಲಾಲ್ ಎಸನ್ ಪ್ರದೇಶದ ನಿವಾಸಿ ಉಮರ್ ಹಯಾತ್, ಮೊಮ್ಮಗ ಹುಟ್ಟಿದ ಸಂತಸದಲ್ಲಿ ಎಪ್ರಿಲ್ 17ರಂದು ಸ್ಥಳೀಯ ಬೇಕರಿಯೊಂದರಿಂದ ಸಿಹಿತಿಂಡಿಗಳನ್ನು ತಂದು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಹಂಚಿದ್ದರು.

ಆದರೆ, ಅವರ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ. ಸಿಹಿ ತಿಂಡಿ ತಿಂದವರ ಪೈಕಿ 10 ಮಂದಿ ಅದೇ ದಿನ ಮೃತಪಟ್ಟರು.

‘‘ವಿಷಪೂರಿತ ಸಿಹಿ ತಿಂಡಿ ತಿಂದು ಮೃತಪಟ್ಟವರ ಸಂಖ್ಯೆ 23ಕ್ಕೇರಿದೆ ಹಾಗೂ 52 ಮಂದಿ ಈಗಲೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮುನೀರ್ ಅಹ್ಮದ್ ಸೋಮವಾರ ತಿಳಿಸಿದರು.

ನವಜಾತ ಶಿಶುವಿನ ತಂದೆ ಮತ್ತು ಏಳು ಮಂದಿ ಚಿಕ್ಕಪ್ಪ, ಡೊಡ್ಡಪ್ಪ, ಮಾವಂದಿರು ಮೃತಪಟ್ಟವರಲ್ಲಿ ಸೇರಿದ್ದಾರೆ.

ಸಿಹಿ ತಿಂಡಿ ಮಾರಾಟ ಮಾಡಿದ ಬೇಕರಿಯ ಇಬ್ಬರು ಮಾಲೀಕ ಸಹೋದರರು ಮತ್ತು ಓರ್ವ ಕೆಲಸಗಾರನನ್ನು ಬಂಧಿಸಲಾಗಿದೆ.

ಬೇಕರಿಯ ಸಮೀಪದಲ್ಲಿರುವ ಕೀಟನಾಶಕ ಅಂಗಡಿಯ ದುರಸ್ತಿ ನಡೆಯುತ್ತಿತ್ತು. ಅದರ ಮಾಲೀಕ ತನ್ನಲ್ಲಿದ್ದ ಕೀಟನಾಶಕಗಳನ್ನು ಸುರಕ್ಷಿತವಾಗಿಸಲು ಬೇಕರಿಯಲ್ಲಿ ಇಟ್ಟಿದ್ದ ಎನ್ನಲಾಗಿದೆ. ಆಗ ಕೀಟನಾಶಕದ ಅಂಶಗಳು ಸಿಹಿತಿಂಡಿಗಳ ನಡುವೆ ಸೇರಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News