×
Ad

1,017 ಕೋಟಿ ರೂ.ನೊಂದಿಗೆ ಕಂಪೆನಿ ಮುಖ್ಯಸ್ಥ ನಾಪತ್ತೆ!

Update: 2016-04-25 19:05 IST

ಬೀಜಿಂಗ್, ಎ. 25: ಹೂಡಿಕೆದಾರರ 153 ಮಿಲಿಯ ಡಾಲರ್ (1,017 ಕೋಟಿ ರೂಪಾಯಿ) ಹಣದೊಂದಿಗೆ ನಾಪತ್ತೆಯಾಗಿರುವ ಜನಪ್ರಿಯ ಸಂಪತ್ತು ನಿರ್ವಹಣೆ ಕಂಪೆನಿಯೊಂದರ ಮಾಲೀಕನಿಗಾಗಿ ಚೀನಾ ಪೊಲೀಸರು ಬೃಹತ್ ನರಬೇಟೆ ಆರಂಭಿಸಿದ್ದಾರೆ.

ತನ್ನ ಅಧ್ಯಕ್ಷ ಯಾಂಗ್ ವೇಗುವೊ ನಾಪತ್ತೆಯಾಗಿದ್ದಾರೆ ಎಂಬುದನ್ನು ವಾಂಗ್ಝೂ ಗ್ರೂಪ್ ಗುರುವಾರ ಖಚಿತಪಡಿಸಿದ ಬಳಿಕ, ಪೂರ್ವ ಚೀನಾದ ನಗರ ಹಂಗ್ಝೂ ಎಂಬಲ್ಲಿಂದ ಪೊಲೀಸರು ಶೋಧ ಆರಂಭಿಸಿದ್ದಾರೆ.

ಕಂಪೆನಿಯ ಹಣದ ಹರಿವಿನಲ್ಲಿ ಸಮಸ್ಯೆಯುಂಟಾಗುತ್ತಿದೆ ಎಂಬುದಾಗಿ ಹೂಡಿಕೆದಾರರು ಎಪ್ರಿಲ್ 18ರಿಂದ ದೂರುತ್ತಿದ್ದಾರೆ.

ಹಗರಣ ಬೆಳಕಿಗೆ ಬಂದ ಬಳಿಕ ವಾಂಗ್ಝೂ ಗ್ರೂಪ್ ಹಂಗ್ಝೂನಲ್ಲಿರುವ ತನ್ನ ಶಾಪಿಂಗ್ ಮಾಲನ್ನು ಮುಚ್ಚಿದೆ.

ವಾಂಗ್ಝೂ ಗ್ರೂಪ್ ವಾಣಿಜ್ಯ, ಅಟೊಮೊಬೈಲ್ಸ್, ಆರೋಗ್ಯ ಮತ್ತು ಸಂಪತ್ತು ನಿರ್ವಹಣೆ ಕ್ಷೇತ್ರಗಳಲ್ಲಿ 200ಕ್ಕೂ ಅಧಿಕ ಅಂಗಸಂಸ್ಥೆಗಳನ್ನು ಹೊಂದಿದೆ ಹಾಗೂ 70 ನಗರಗಳಲ್ಲಿ ಸುಮಾರು 7,000 ಉದ್ಯೋಗಿಗಳನ್ನು ಹೊಂದಿದೆ.

ಶೀಘ್ರವೇ ವಾಪಸಾಗುತ್ತೇನೆ : ಆನ್‌ಲೈನ್ ವೀಡಿಯೊದಲ್ಲಿ ನಾಪತ್ತೆಯಾದಾತನಿಂದ ಭರವಸೆ

1,017 ಕೋಟಿ ರೂಪಾಯಿ ಹೂಡಿಕೆದಾರರ ಹಣದೊಂದಿಗೆ ನಾಪತ್ತೆಯಾಗಿರುವ ವಾಂಗ್ಝೂ ಗ್ರೂಪ್‌ನ ಅಧ್ಯಕ್ಷ ಯಾಂಗ್ ವೇಗುವೊ ಸೋಮವಾರ ಆನ್‌ಲೈನ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದು, ತಾನು ‘‘ಶೀಘ್ರದಲ್ಲೇ ಮರಳುವುದಾಗಿ’’ ಹೇಳಿದ್ದಾರೆ.

‘‘ಎಲ್ಲರಿಗೂ ವಂದನೆಗಳು, ಇದು ನಾನು’’ ಎಂದು ಯಾಂಗ್ ಎಂದು ಗುರುತಿಸಲ್ಪಟ್ಟ ಸೂಟ್ ಜಾಕೆಟ್ ಮತ್ತು ಓಪನ್ ನೆಕ್ ಅಂಗಿ ಧರಿಸಿದ ವ್ಯಕ್ತಿಯೋರ್ವ ‘21ಸ್ಟ್ ಸೆಂಚುರಿ ಬಿಝ್ನೆಸ್ ಹೆರಾಲ್ಡ್’ ಪ್ರಸಾರಿಸಿದ ವೀಡಿಯೊದಲ್ಲಿ ಹೇಳುತ್ತಾನೆ. ‘‘ಚಿಂತಿಸಬೇಡಿ, ನಾನು ಶೀಘ್ರವೇ ವಾಪಸಾಗುತ್ತೇನೆ’’ ಎಂದು ಅದರಲ್ಲಿ ಆ ವ್ಯಕ್ತಿ ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News