ಭಾರತದ ಬೀಫ್ ರಾಜಕೀಯದಿಂದ ಆತಂಕ: ಸಿಂಗಾಪುರ ಮಾಜಿ ಸಚಿವ
ಸಿಂಗಾಪುರ, ಎ. 25: ಭಾರತದಲ್ಲಿ ಬೀಫ್ ಸೇವನೆಯ ಸುತ್ತ ಎದ್ದಿರುವ ರಾಜಕೀಯದಿಂದ ತಾನು ಆತಂಕಿತನಾಗಿದ್ದೇನೆ ಎಂದು ಸಿಂಗಾಪುರದ ಮಾಜಿ ವಿದೇಶ ಸಚಿವ ಜಾರ್ಜ್ ಯೋ ಹೇಳಿದ್ದಾರೆ.
ಯೋ ಈಗ ಬಿಹಾರದ ನಳಂದ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾರೆ. ನಳಂದ ವಿಶ್ವವಿದ್ಯಾಲಯವನ್ನು ಈಗ ಜಾಗತಿಕ ಸಂಸ್ಥೆಯಾಗಿ ಪುನರ್ನಿರ್ಮಿಸಲಾಗುತ್ತಿದೆ.
ತಾನು ಬೀಫ್ ನೂಡಲ್ಸ್ ತಿನ್ನುವ ಚಿತ್ರವನ್ನು ಫೇಸ್‌ಬುಕ್‌ನಿಂದ ಅಳಿಸಿ ಹಾಕುವಂತೆ ಹಿತೈಷಿಯೊಬ್ಬರು ತನಗೆ ಸಲಹೆ ನೀಡಿದ್ದನ್ನು ಹಿರಿಯ ಪತ್ರಕರ್ತ ರವಿ ವೆಲ್ಲೂರು ಅವರ ಹೊಸ ಪುಸ್ತಕಕ್ಕೆ ಬರೆದ ಸುದೀರ್ಘ ಮುನ್ನುಡಿಯಲ್ಲಿ ಯೋ ಸ್ಮರಿಸಿಕೊಂಡಿದ್ದಾರೆ.
ಮಾಜಿ ಕಾಂಗ್ರೆಸ್ ಸಚಿವರೊಬ್ಬರು ಪುತ್ರ ತನಗೆ ಈ ಸಲಹೆ ನೀಡಿದಾಗ ತಾನು ‘‘ಆತಂಕಗೊಂಡಿದ್ದೆ’’ ಎಂದು 61 ವರ್ಷದ ರಾಜಕಾರಣಿ ಹೇಳಿದರು.
‘‘ನಾನು ಮತ್ತು ನನ್ನ ಪತ್ನಿ ಹಾರ್ವರ್ಡ್ ಸ್ಕ್ವೇರ್‌ನಲ್ಲಿ ‘ಫೋ’ (ವಿಯೆಟ್ನಾಂನ ಬೀಫ್ ನೂಡಲ್ಸ್) ತಿನ್ನುತ್ತಿರುವ ಚಿತ್ರವನ್ನು ನಾನು ಫೇಸ್‌ಬುಕ್‌ನಲ್ಲಿ ಹಾಕಿದ್ದೆ’’ ಎಂದು ಯೋ ಬರೆದಿದ್ದಾರೆ.
‘‘ಇದು ನಳಂದ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನನ್ನ ನೂತನ ಹುದ್ದೆಗೆ ಭಾರತದಲ್ಲಿ ವ್ಯತಿರಿಕ್ತ ಅಭಿಪ್ರಾಯವನ್ನು ಸೃಷ್ಟಿಸಬಹುದು ಎಂಬುದಾಗಿ ಮಾಜಿ ಕಾಂಗ್ರೆಸ್ ನಾಯಕರ ಮಗ ಭಾವಿಸಿದ್ದರು. ಅವರ ಅಭಿಪ್ರಾಯ ಸರಿಯಾಗಿಯೇ ಇದೆ ಎಂದು ನನಗೆ ಗೊತ್ತಿತ್ತು. ವಾಸ್ತವವಾಗಿ ನಾನು ಅವರ ಸಲಹೆಯನ್ನು ಸ್ವೀಕರಿಸಲಿಲ್ಲ. ಆದರೆ, ಅವರ ಆ ತಳಮಳ ನನ್ನನ್ನು ಆತಂಕಗೊಳಿಸಿತು’’ ಎಂದು ಯೋ ಹೇಳಿದ್ದಾರೆ.
ರವಿ ವೆಲ್ಲೂರು ಅವರ ಪುಸ್ತಕ ‘ಇಂಡಿಯ ರೈಸಿಂಗ್: ಫ್ರೆಶ್ ಹೋಪ್ಸ್, ನ್ಯೂ ಫಿಯರ್ಸ್’ಗೆ ಬರೆದ ಮುನ್ನುಡಿಯಲ್ಲಿ ಈ ಮಾತುಗಳಿವೆ. ಪುಸ್ಕತ ಕಳೆದ ವಾರ ಇಲ್ಲಿ ಬಿಡುಗಡೆಗೊಂಡಿತು.
ಭಾರತೀಯ ನಾಗರಿಕತೆಯಲ್ಲಿ ಮಿಳಿತಗೊಂಡಿರುವ ಸಹಿಷ್ಣುತೆ ಮತ್ತು ವಿವಿಧತೆಗಳೇ ಭಾರತದ ಕಡಿಮೆ ಹಿಂಸಾತ್ಮಕ ಪ್ರವೃತ್ತಿಗೆ ಪ್ರಮುಖ ಕಾರಣವಾಗಿದೆ ಎಂದು ಯೋ ಅಭಿಪ್ರಾಯಪಟ್ಟರು. ಭಾರತ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಹೋಗುವವರೆಗೆ ಜಗತ್ತಿಗೆ ಅದು ನೀಡುವ ಕೊಡುಗೆ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಿಗೆ ಅದು ನೀಡುವ ದೇಣಿಗೆಗಿಂತಲೂ ಹೆಚ್ಚಿನದಾಗಿದೆ ಎಂದು ಅವರು ಹೇಳಿದರು.
2002ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ಸುಟ್ಟುಹೋದ ನತದೃಷ್ಟ ರೈಲು, 100 ಕಿ.ಮೀ. ಮೊದಲೇ ಅದು ಮಧ್ಯಪ್ರದೇಶದಲ್ಲಿ ಸುಟ್ಟುಹೋಗಿದ್ದರೆ, ಜಗತ್ತು ನರೇಂದ್ರ ಮೋದಿಯನ್ನು ನೋಡುವ ರೀತಿಯೇ ಬೇರೆಯಾಗಿರುತ್ತಿತ್ತು ಎಂದು ಲೇಖಕ ವೆಲ್ಲೂರು ಹೇಳಿದರು.
ಭಾರತ ಜಾಗತಿಕ ಶಕ್ತಿಯಾಗಿ ಉದಯಿಸುತ್ತದೆ ಎಂದು ಪುಸ್ತಕ ಭವಿಷ್ಯ ನುಡಿದಿದೆ. ದೇಶದ ಬಗ್ಗೆ ಜನರಲ್ಲಿ ರೋಮಾಂಚಕತೆಯ ಭಾವ ಹೆಚ್ಚುತ್ತಿರುವಂತೆಯೇ, ಅದರ ಜಾತ್ಯತೀತ ಹಂದರದಲ್ಲಿ ಕಾಣಿಸಿಕೊಂಡಿರುವ ಬಿರುಕುಗಳ ಬಗ್ಗೆ ಅದರ ವಿದೇಶಿ ನಿಕಟ ಸ್ನೇಹಿತರು ಚಿಂತೆ ಮಾಡಲು ಆರಂಭಿಸಿದ್ದಾರೆ.